ಸರ್ಕಾರಿ ಲೀಜ್ ಭೂಮಿ ವಾಪಸಿಗೆ ಸಿಎಂ ಪ್ಲಾನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.14- ಸರ್ಕಾರಿ ಭೂಮಿಯನ್ನು ಕನಿಷ್ಟ ಬೆಲೆಗೆ ಲೀಜ್ ಪಡೆದು ಕೋಟಿ ಕೋಟಿ ದುಡ್ಡು ಮಾಡಲು ಮುಂದಾಗಿರುವ ಸಂಸ್ಥೆಗಳಿಂದ ಭೂಮಿಯನ್ನು ವಾಪಸ್ ಪಡೆಯುವ ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಗೊಂಡಿದ್ದಾರೆ. ಈ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿಗಳು 15 ದಿನಗಳೊಳಗೆ ಸಮಗ್ರ ಮಾಹಿತಿ ಒದಗಿಸುವಂತೆ ತಾಕೀತು ಮಾಡಿದ್ದಾರೆ.

ನಗರದಲ್ಲಿ ಹಲವಾರು ಸಂಘ-ಸಂಸ್ಥೆಗಳು ಬಿಬಿಎಂಪಿ ಆಸ್ತಿಯನ್ನು ಕೇವಲ ಒಂದೆರಡು ರೂಪಾಯಿಗೆ ಲೀಜ್ ಪಡೆದು ಕಾನೂನು ಉಲ್ಲಂಘಿಸಿ ಕೋಟ್ಯಂತರ ರೂ. ಹಣ ಸಂಪಾದನೆ ಮಾಡುತ್ತಿದ್ದಾರೆ. ಇದುವರೆಗೂ ಲೀಜ್ ಪಡೆದವರಿಂದ ಭೂಮಿಯನ್ನು ವಾಪಸ್ ಪಡೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಭೂಮಿ ಲೀಜ್ ಪಡೆದಿರುವ ಹಲವಾರು ಸಂಸ್ಥೆಯವರು ಲೀಜ್ ಭೂಮಿಯಲ್ಲಿ ಕ್ಲಬ್, ಶಾಲಾ ಕಟ್ಟಡ ಸೇರಿದಂತೆ ಹಲವಾರು ಆದಾಯ ಬರುವ ಉದ್ದಿಮೆಗಳನ್ನು ಸ್ಥಾಪಿಸಿ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ.

ಲೀಜ್‍ಗೆ ಪಡೆದಿರುವ ಆಸ್ತಿಯನ್ನು ಬಿಡಿಸಿಕೊಳ್ಳಲು ಇದುವರೆಗೂ ಹಲವಾರು ಪ್ರಯತ್ನ ಮಾಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ.  ಕೆಲವರು ಬಿಬಿಎಂಪಿಯಿಂದ ಲೀಜ್ ಪಡೆದ ಭೂಮಿಯನ್ನೇ ಬೇರೆಯವರಿಗೆ ಪರಭಾರೆ ಮಾಡಿರುವ ಹಲವಾರು ಉದಾಹರಣೆಗಳಿವೆ. ಸರ್ಕಾರಿ ಭೂಮಿ ಪಡೆದು ವಂಚಿಸುತ್ತಿರುವ ಇಂತಹ ಖದೀಮರಿಗೆ ಬಿಸಿ ಮುಟ್ಟಿಸಲು

ಮುಂದಾಗಿರುವ ಯಡಿಯೂರಪ್ಪ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೂ ಬಾಡಿಗೆ, ಗುತ್ತಿಗೆ, ಲೀಜ್ ಇತ್ಯಾದಿ ಆದಾಯದ ಮೇಲೆ ಭೂಮಿಯನ್ನು ಲೀಜ್ ಪಡೆದು ಶಾಲಾ-ಕಾಲೇಜು, ಪೆಟ್ರೋಲ್ ಬಂಕ್, ಕ್ಲಬ್‍ಗಳು, ನಿಗಮ-ಮಂಡಳಿಗಳು, ಇತರ ಸಂಘ-ಸಂಸ್ಥೆಗಳಿಗೆ ನೀಡಿರುವ ಜಮೀನು, ನಿವೇಶನ, ಕಟ್ಟಡ, ವಾಣಿಜ್ಯ ಮಳಿಗೆಗಳು ಮತ್ತು ಅವುಗಳಿಂದ ಬರಬೇಕಿರುವ ಬಾಕಿ ಮತ್ತು ಬಡ್ಡಿಯ ಸಂಪೂರ್ಣ ವಿವರವನ್ನು 15 ದಿನಗಳೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Facebook Comments