ಮಧ್ಯರಾತ್ರಿ 12ರವರೆಗೂ ಕರ್ತವ್ಯ ನಿರ್ವಹಿಸಿ ಅಧಿಕಾರ ಹಸ್ತಾಂತರಿಸಿದ ಅಧಿಕಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಧಾರವಾಡ,ಜೂ.1- ಕರ್ತವ್ಯದ ಅವಧಿಯ ಕೊನೆಯ ಗಳಿಗೆಯವರೆಗೂ ಜವಾಬ್ದಾರಿ ನಿರ್ವಹಿಸಿ, ಸರ್ಕಾರದ ಋಣ ತೀರಿಸಬೇಕೆಂಬ ಆದರ್ಶಗಳೊಂದಿಗೆ ಧಾರವಾಡ ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ.ಸಂಗಮೇಶ ಕಲಹಾಳ ಅವರು ತಮ್ಮ ಸೇವಾ ನಿವೃತ್ತಿ ದಿನದ ಕೊನೆಯ ಗಳಿಗೆವರೆಗೂ ಕರ್ತವ್ಯ ನಿರ್ವಹಿಸಿ ಮೇ.31ರ ಮಧ್ಯ ರಾತ್ರಿ 12 ಗಂಟೆಗೆ ಅಧಿಕಾರ ಹಸ್ತಾಂತರಿಸಿದರು.

ನಿರ್ಗಮಿತ ಜಿಲ್ಲಾ ಆಯುಕ್ತ ಡಾ.ಸಂಗಮೇಶ ಕಲಹಾಳ ಮಾತನಾಡಿ, ಸರ್ಕಾರದ ನಿಯಮದಂತೆ ಒಂದು ದಿನವೆಂದರೆ ಮಧ್ಯರಾತ್ರಿ 12 ಗಂಟೆಯಿಂದ ಮುಂದಿನ ದಿನದ ಮಧ್ಯರಾತ್ರಿ 12 ರವರೆಗೆ ಎಂದು ಸೂಚಿಸಲಾಗಿದೆ. ಒಂದು ದಿನದ ವೇತನವೆಂದರೆ 24 ತಾಸುಗಳಿಗೆ ನೀಡುವಂತಹದ್ದಾಗಿದೆ.

ನೌಕರರು ಸಮರ್ಥವಾಗಿ ಕಾರ್ಯನಿರ್ವಹಿಸಲು ದೈಹಿಕ, ಮಾನಸಿಕ ಆರೋಗ್ಯದೃಷ್ಟಿಯಿಂದ ಕೆಲಸದ ವೇಳೆಯನ್ನು ನಿಗದಿಪಡಿಸಲಾಗಿರುತ್ತದೆ. ಹೀಗಿದ್ದರೂ ಅತ್ಯವಶ್ಯಕ ಮತ್ತು ತುರ್ತು ಸ್ಥಿತಿಯಲ್ಲಿ ದಿನದ ಯಾವುದೇ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಬೇಕಾಗಿರುತ್ತದೆ ಎಂದರು.

ಮೇ.31ರಂದು ಮಧ್ಯರಾತ್ರಿ 12 ಘಂಟೆಗೆ ಧಾರವಾಡ ಜಿಲ್ಲಾ ಆಯುಕ್ತ ಹುದ್ದೆಯ ಕಾರ್ಯಭಾರವನ್ನು ಹಿರಿಯ ವ್ಯೆದ್ಯಾಧಿಕಾರಿ ಡಾ. ಮೀನಾಕ್ಷಿ ಅವಲೂರು ಶಾಂತಣ್ಣ ಇವರಿಗೆ ವಹಿಸಿದರು.ಇದೇ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಧಾರವಾಡ ಹಿರಿಯ ವ್ಯೆದ್ಯಾಧಿಕಾರಿ ಹುದ್ದೆಯ ಆಡಳಿತಾತ್ಮಕ ಕಾರ್ಯಭಾರವನ್ನು ಹಿರಿಯ ವ್ಯೆದ್ಯಾಧಿಕಾರಿ ಡಾ. ಸುಂಮಗಲಾ ಎಸ್. ಇವರಿಗೆ ವಹಿಸಿಕೊಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ. ಬಿ. ಪಿ. ಪೂಜರಿ, ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ ಹಿರಿಯ ವ್ಯೆದ್ಯಾಧಿಕಾರಿ ಡಾ. ಸುಂಮಗಲಾ ಎಸ್, ಸಹಾಯಕ ಆಡಳಿತಾಧಿಕಾರಿ ಅಶೋಕ ಅಕ್ಕೇರಿ, ಆಯುಷ್ ಇಲಾಖೆಯ ವ್ಯೆದ್ಯಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ. ಎ. ಎಸ್, ಡಾ. ನಿಂಗಪ್ಪ ಕಿನ್ನಾಳ, ಜಿಲ್ಲಾ ಆಯುಷ್ ಕಚೇರಿ ಮತ್ತು ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಧಾರವಾಡ ಸಿಬ್ಬಂದಿ ವರ್ಗದವರು ಹಾಜರಿದ್ದರು.

Facebook Comments