ಖಾಸಗಿಯವರಿಗೆ ಖಾಲಿ ಕೆರೆ-ಕಟ್ಟೆಗಳನ್ನು ಮಾರಾಟ ಮಾಡಲು ಹೊರಡಿಸಿದ್ದ ಆದೇಶ ವಾಪಾಸ್

ಈ ಸುದ್ದಿಯನ್ನು ಶೇರ್ ಮಾಡಿ

Lakes--01
ಬೆಂಗಳೂರು, ಜೂ.16- ನೀರಿಲ್ಲದೇ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡ ಕೆರೆ-ಕಟ್ಟೆಗಳು ಹಾಗೂ ಹಳ್ಳಗಳನ್ನು ಖಾಸಗಿಯವರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಮಾರಾಟ ಮಾಡಲು ಅವಕಾಶ ನೀಡುವ ಸಂಬಂಧ ಹೊರಡಿಸಲಾದ ಆದೇಶವನ್ನು ರಾಜ್ಯ ಸರ್ಕಾರ ವಾಪಾಸ್ ಪಡೆದಿದೆ.  ರಾಜ್ಯದಲ್ಲಿ ಕಂದಾಯ ಇಲಾಖೆಗೆ ಸೇರಿದ ಕೆರೆಕಟ್ಟೆಗಳು ಮತ್ತು ಹಳ್ಳಗಳು ನೀರಿಲ್ಲದೇ ಬತ್ತಿ ಹೋಗಿ ಜಲಮೂಲದ ಸ್ವರೂಪವನ್ನು ಕಳೆದುಕೊಂಡರೆ ಅಂತಹ ಭೂಮಿಯನ್ನು ಖಾಸಗಿ ಉದ್ದಿಮೆಗಳಿಗೆ, ಸಂಘ ಸಂಸ್ಥೆಗಳಿಗೆ ಮಾರಾಟ ಮಾಡಲು ಎರಡು ಸಾವಿರದ ಇಸವಿಯಲ್ಲಿ ಅವಕಾಶ ನೀಡಿ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆ ಆದೇಶವನ್ನು ತತ್‍ಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂದಕ್ಕೆ ಪಡೆಯಲಾಗಿದೆ.
ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಈ ವಿಷಯ ತಿಳಿಸಿದ್ದು, 18 ವರ್ಷಗಳ ಬಳಿಕ ಕೆರೆಕಟ್ಟೆಗಳನ್ನು ರಕ್ಷಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ ಎಂದಿದ್ದಾರೆ. ಮೂಲಸ್ವರೂಪ ಕಳೆದುಕೊಂಡ ಕೆರೆಗಳ ಜಾಗವನ್ನು ನೀರಾವರಿ ಇಲಾಖೆಯ ಸಹಮತದೊಂದಿಗೆ ಖಾಸಗಿಯವರಿಗೆ ಮಾರಾಟ ಮಾಡಲು ಇಲ್ಲಿಯ ತನಕ ಜಿಲ್ಲಾಧಿಕಾರಿಗಳಿಗೆ ಇದ್ದ ಅಧಿಕಾರವನ್ನು ಸಹ ರದ್ದುಪಡಿಸಲಾಗಿದೆ.

ಹಸಿರು ನ್ಯಾಯ ಪೀಠವು (ಎನ್.ಜಿ.ಟಿ ) ಕಳೆದ ವರ್ಷ ಮೇ 4ರಂದು ಕೆರೆಗಳ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅಷ್ಟೇ ಅಲ್ಲದೆ ನೀರು ಬತ್ತಿದ ಕೆರೆಗಳು, ಹಳ್ಳಗಳು ಮೂಲ ಸ್ವರೂಪ ಕಳೆದುಕೊಂಡಿದ್ದರೂ ಅವುಗಳಲ್ಲಿ ನೀರು ಇರಲಿ, ಇಲ್ಲದಿರಲಿ ಅವು ಜಲಮೂಲಗಳೇ ಎಂದು ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ2004 ರ ಪ್ರಕರಣ 1( ಹೆಚ್) ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿತ್ತು.

ಕಳೆದ ಸರ್ಕಾರದ ಅವಧಿಯಲ್ಲಿ ಮೂಲ ಸ್ವರೂಪ ಕಳೆದುಕೊಂಡ ಕೆರೆಗಳ ಜಾಗವನ್ನು ಖಾಸಗಿಯವರಿಗೆ, ಒತ್ತುವರಿದಾರರಿಗೆ ಪರಭಾರೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸಾರ್ವಜನಿಕವಾಗಿ ತೀವ್ರ ಪ್ರತಿರೋಧ ವ್ಯಕ್ತವಾಗಿ ಇದು ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ಮಾಡಿ ಕೊಡುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿದಿತ್ತು.

Facebook Comments

Sri Raghav

Admin