ಕಂಪನಿ ಕೆಲಸಗಾರರಿಗೆ ಸರ್ಕಾರದಿಂದಲೇ ಸಂಬಳ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.15- ಕೋವಿಡ್-19 ಸಂದರ್ಭದಲ್ಲಿ ತನ್ನ ದೇಶದ ಪ್ರಜೆಗಳ ನೆರವಿಗೆ ಬ್ರಿಟನ್ ಸರ್ಕಾರ ತೆಗೆದುಕೊಂಡ ಕ್ರಮಗಳು ಶ್ಲಾಘನೆಗೆ ಕಾರಣವಾಗಿದ್ದು, ಭಾರತದಲ್ಲೂ ಅದೇ ಮಾದರಿಯ ಪ್ಯಾಕೇಜ್ ಗಳ ಘೋಷಣೆಯಾಗಬೇಕು ಎಂಬ ಒತ್ತಾಸೆಗಳು ಕೇಳಿ ಬರುತ್ತಿವೆ.

ಬ್ರಿಟನ್ ಸರ್ಕಾರ ಕಾಲ ಕಾಲಕ್ಕೆ ಪರಿಷ್ಕೃತ ಪ್ಯಾಕೇಜ್ ಗಳನ್ನು ಘೋಷಣೆ ಮಾಡುವ ಮೂಲಕ ತನ್ನ ದೇಶದ ಉದ್ದಿಮೆಗಳು, ಕಾರ್ಮಿಕರ ನೆರವಿಗೆ ಮಾದರಿ ಯೋಜನೆಯನ್ನು ಘೋಷಣೆ ಮಾಡಿದೆ.

ಕೋವಿಡ್-19 ಸಂದರ್ಭದಲ್ಲಿ ಕಂಪೆನಿಗಳು ಯಾವುದೇ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯಬಾರದು, ಅಷ್ಟೇ ಅಲ್ಲದೆ ವೇತನ ಕಡಿತ ಮಾಡಬಾರದು ಎಂದು ಸ್ಪಷ್ಟ ಸೂಚನೆ ನೀಡಿದೆ. ಒಂದು ವೇಳೆ ವೇತನ ಪಾವತಿ ಮಾಡಲು ಸಾಧ್ಯವಿಲ್ಲದಿದ್ದರೆ ಮತ್ತು ಸಿಬ್ಬಂದಿಗಳನ್ನು ಕೆಲಸದಲ್ಲಿ ಮುಂದುವರೆಸಲು ಸಾಧ್ಯವಿಲ್ಲದಷ್ಟು ಆರ್ಥಿಕ ದುಸ್ಥಿತಿಯಲ್ಲಿ ಕಂಪೆನಿಯಿದ್ದರೆ ಆ ಸಂದರ್ಭದಲ್ಲಿ ಸರ್ಕಾರವೇ ನೆರವಿಗೆ ಧಾವಿಸಲಿದೆ.

ಕಂಪೆನಿ ತನ್ನ ಆರ್ಥಿಕ ಮಿತಿಯನ್ನು ಪ್ರಾಮಾಣಿಕವಾಗಿ ಘೋಷಣೆ ಮಾಡಿ ಸರ್ಕಾರಕ್ಕೆ ಮಾಹಿತಿ ನೀಡಿ ತಮ್ಮ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಿಲ್ಲ ಎಂದು ದೃಢಿಕರಣ ಪತ್ರ ನೀಡಿದ್ದರೆ ಸರ್ಕಾರ ವೇತನ ಪಾವತಿಯ ಜವಾಬ್ದಾರಿಯನ್ನು ನಿರ್ವಹಿಸಲಿದೆ.

ಸಿಬ್ಬಂದಿಗಳು ಎಷ್ಟೆ ವೇತನ ಪಡೆಯುತ್ತಿದ್ದರೂ ಅದನ್ನು ಲೆಕ್ಕಿಸದೆ ಸರ್ಕಾರ ನೇರವಾಗಿ ಪ್ರತಿಯೊಬ್ಬ ಸಿಬ್ಬಂದಿಗೂ 2500 ಪೌಂಡ್ ವೇತನವನ್ನು ಪಾವತಿಸಲಿದೆ. ಮೂರು ತಿಂಗಳ ವರೆಗೆ ಈ ರೀತಿ ವೇತನ ಪಾವತಿ ಮಾಡಲಾಗುತ್ತಿದೆ. ಅಗತ್ಯ ಕಂಡು ಬಂದರೆ ಮೇ ತಿಂಗಳ ನಂತರವೂ ಮುಂದುವರೆಸಲು ಪರಿಶೀಲನೆ ನಡೆಸುವುದಾಗಿ ಬ್ರಿಟನ್ ನ ಚಾನ್ಸಲರ್ ರಿಷಿ ಸುನಕ್ ಹೇಳಿದ್ದಾರೆ.

ಈ ಅವಧಿಯಲ್ಲಿ ಸಿಬ್ಬಂದಿಗಳು ಕಂಪೆನಿಯ ಉದ್ಯೋಗಿಗಳಾಗಿಯೇ ಮುಂದುವರೆಯಲಿದ್ದಾರೆ. ಅಗತ್ಯ ಇದ್ದರೆ ಕಂಪೆನಿಯಲ್ಲಿ ಸಿಬ್ಬಂದಿಗಳು ಕೆಲಸ ಮಾಡಬಹುದು. ಕಂಪೆನಿ ತನ್ನಿಂದ ವೇತನ ಪಾವತಿ ಮಾಡಲು ಸಾಧ್ಯವಿಲ್ಲದಿರುವುದಕ್ಕೆ ಸಕಾರಣವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ.

ಇಷ್ಟೇ ಅಲ್ಲದೆ ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿ ನೀಡಿದೆ, ಕೈಗಾರಿಕೆಗಳು ಹಾಗೂ ಉದ್ದಿಮೆದಾರರು ಬಾಡಿಗೆ ಪಾವತಿಸಬೇಕಾದರೆ ಅದನ್ನು ಸರ್ಕಾರವೇ ಭರಿಸುತ್ತಿದೆ. ಒಂದು ವರ್ಷದ ವರೆಗೂ ಬಡ್ಡಿ ರಹಿತ ಸಾಲ ಒದಗಿಸಲಾಗುತ್ತಿದೆ. ಲಾಕ್ ಡೌನ್ ನಿಂದ ಸಂತ್ರಸ್ತವಾಗಿರುವ ಜನರಿಗೆ ಆರ್ಥಿಕವಾಗಿ ಸಂಕಷ್ಟವಾಗದಂತೆ ಬ್ರಿಟನ್ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ.

ನಿನ್ನೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಬಹುಶಃ ಬ್ರಿಟನ್ ಸರ್ಕಾರದ ಮಾದರಿಯಲ್ಲಿ ಆರ್ಥಿಕ ನೆರವು ಘೋಷಣೆ ಮಾಡಬಹುದು ಎಂಬ ನಿರೀಕ್ಷೆಗಳು ಬಹಳಷ್ಟಿದ್ದವು.

Facebook Comments

Sri Raghav

Admin