ನನ್ನ ಮಗ ಶಿವನ ವರಪ್ರಸಾದ, ಶೀಘ್ರದಲ್ಲೇ ಹೊರಬರುತ್ತಾನೆ: ಡಿಕೆಶಿ ತಾಯಿ ಗೌರಮ್ಮ

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ,ಸೆ.4- ನನ್ನ ಮಗ ಶಿವನ ವರಪ್ರಸಾದ. ಎಲ್ಲ ಕಷ್ಟಗಳು ಬಗೆಹರಿದು ಆತ ಶೀಘ್ರದಲ್ಲೇ ಹೊರಬರುತ್ತಾನೆ ಎಂಬ ನಂಬಿಕೆ ಇದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಬಿಕ್ಕಳಿಸುತ್ತಾ ಹೇಳಿದ್ದಾರೆ.  ಡಿ.ಕೆ.ಶಿವಕುಮಾರ್ ಅವರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಮಾಳೆಗವಿ ಮಠದ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿಯವರು ದೊಡ್ಡಹಾಲನಹಳ್ಳಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ ತಾಯಿ ಗೌರಮ್ಮ ಅವರನ್ನು ಸಂತೈಸಿದರು.

ಈ ಸಂದರ್ಭದಲ್ಲಿ ಧೈರ್ಯವಾಗಿರಿ ಕಷ್ಟಗಳು ಶೀಘ್ರ ಪರಿಹಾರವಾಗುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಗಮನಕೊಡಿ ಎಂದು ಧೈರ್ಯ ಹೇಳಿದ್ದಾರೆ. ನಂತರ ಸುದ್ದಿಗಾರರ ಜೊತೆ ಮಾತನಾಡಿದ ತಾಯಿ ಗೌರಮ್ಮ ಅವರು, ಸದ್ಯಕ್ಕೆ ನಾನು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ನನ್ನ ಮಗ ಶಿವನ ವರಪ್ರಸಾದದಿಂದ ಹುಟ್ಟಿದವನು. ಎಲ್ಲ ಕಷ್ಟಗಳನ್ನು ಜಯಿಸಿ ಶೀಘ್ರದಲ್ಲೇ ಹೊರಬರುತ್ತಾನೆ. ನನ್ನ ಮಗನಿಗೆ ದೇವರ ಆಶೀರ್ವಾದವಿದೆ ಎಂದು ಗದ್ಗರಿತರಾದರು.

ಡಿ.ಕೆ.ಶಿವಕುಮಾರ್ ಅವರ ಪರವಾಗಿ ಪ್ರತಿಭಟನೆ ಮಾಡುವವರು ಜನರಿಗೆ ತೊಂದರೆ ಕೊಡಬೇಡಿ. ಶಾಂತಿಯುತವಾಗಿರಬೇಕೆಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಮುಮ್ಮಡಿ ಶಿವರುದ್ರ ಸ್ವಾಮೀಜಿ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ನಮ್ಮ ತಾಲೂಕಿನ ಅಭಿವೃದ್ಧಿಯ ಹರಿಕಾರರು. ಅವರ ಬಂಧನದ ಪ್ರಕ್ರಿಯೆ ಸರಿಯಿಲ್ಲ. ಅವರಿಗೆ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿ ಶೀಘ್ರವೇ ಪರಿಹಾರವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Facebook Comments