ಗ್ರಾ.ಪಂ.ಗಳಿಗೆ ಸದಸ್ಯರ ನೇಮಕಾತಿ ವಿಚಾರ ಕೈಬಿಟ್ಟ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.11-ಗ್ರಾಮಪಂಚಾಯ್ತಿಗಳಿಗೆ ಚುನಾವಣೆ ನಡೆಸದೆ ಸದಸ್ಯರ ನೇಮಕಾತಿ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ. ಕಾಂಗ್ರೆಸ್ ವತಿಯಿಂದ ಪ್ರಬಲವಾದ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ತಮ್ಮ ನಿರ್ಧಾರವನ್ನು ಬದಲಿಸಿದ್ದು, ಸದಸ್ಯರ ನೇಮಕಾತಿಯ ಬದಲಾಗಿ ಗ್ರಾಪಂಗಳಿಗೆ ಆಡಳಿತ ಅಧಿಕಾರಿಗಳನ್ನು ನಿಯೋಜಿಸಲು ಮುಂದಾಗಿವೆ.

ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಲು ನಿರ್ಧಾರ ತೆಗೆದುಕೊಳ್ಳುವಂತೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಜೊತೆಯಲ್ಲೆ ಎರಡುಮೂರು ತಿಂಗಳ ಅವಧಿಯಲ್ಲಿ ಚುನಾವಣೆ ನಡೆಸಲು ತಯಾರಿ ಮಾಡಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ. ಜಿಲ್ಲಾಧಿಕಾರಿಗಳ ಮೂಲಕ ಗ್ರಾಪಂಗಳಿಗೆ ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನುಕೈಬಿಡಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಇಲಾಖೆಗೆ ವೈದ್ಯರು ಮತ್ತು ತಜ್ಞ ವೈದ್ಯರನ್ನು ನೇಮಕಾತಿ ಮಾಡುವಾಗ ಈಗಾಗಲೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಶೇ.2ರಷ್ಟು ಅಂಕಗಳನ್ನು ಹೆಚ್ಚುವರಿಯಾಗಿ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಕೆಎಸ್‍ಆರ್‍ಪಿ, ಸಿಎಆರ್, ಕೆಎಸ್‍ಐಎಸ್‍ಎಫ್ ಶಸ್ತ್ರಸ್ತ್ರ ಪಡೆಗಳಲ್ಲಿ ಕೆಲಸ ಮಾಡುವ ಕಾನ್‍ಸ್ಟೆಬಲ್‍ಗಳ ಪೈಕಿ ಶೇ.10ರಷ್ಟು ಕಾನೂನು ಸುವ್ಯವಸ್ಥೆ ಪೊಲೀಸ್ ವಿಭಾಗಕ್ಕೆ ಬಡ್ತಿ ನೀಡುವ ವೇಳೆ ಸೇರ್ಪಡೆ ಮಾಡಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ಮುಖ್ಯ ಅಧಿಕಾರಿಯಾಗಲು ಡಿವೈಎಸ್ಪಿಯಾಗಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು ಎಂಬ ನಿಯಮವಿದೆ. ಅದನ್ನು 4 ವರ್ಷಗಳಿಗೆ ಕಡಿತ ಮಾಡಲಾಗಿದೆ. ಇಂದಿರಾ ಕ್ಯಾಂಟೀನ್‍ಗಳ ನಿರ್ವಹಣೆ ಕಷ್ಟವಾಗುತ್ತಿರುವುದರಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಚರ್ಚೆ ನಡೆಸಿದ್ದು, ಇಂದು ಸಂಪುಟ ಸಭೆಯಲ್ಲಿ ತುಂಬ ವಿಷಯಗಳಿದ್ದರಿಂದ ಇಂದಿರಾ ಕ್ಯಾಂಟೀನ್ ವಿಷಯವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಿದರು.

ಶಾಲೆಗಳಲ್ಲಿ ಒಂದರಿಂದ 5ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣ ರದ್ದು ಮಾಡಲಾಗಿದೆ. ಅದನ್ನು 7ನೇ ತರಗತಿವರೆಗೂ ವಿಸ್ತರಣೆ ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಎಂದಿನಂತೆ ನಿಗದಿತ ದಿನಾಂಕದಂದು ನಡೆಯಲಿವೆ ಎಂದರು.

ಬೆಂಗಳೂರು ಕೇಂದ್ರ ವಿವಿಯನ್ನು ನಗರ ವಿವಿ ಎಂದು ಎಂದು ಮರುನಾಮಕರಣ ಮಾಡಲಾಗುತ್ತಿದೆ. ಜೊತೆಗೆ ಸರ್ಕಾರಿ ವಿಜ್ಞಾನ ಕಾಲೇಜನ್ನು ಮೇಲ್ದರ್ಜೆಗೇರಿಸಿ ವಿವಿ ಸ್ಥಾನಮಾನ ನೀಡಲಾಗುತ್ತಿದ್ದು, ನೃಪತುಂಗ ಎಂದು ನಾಮಕರಣ ಮಾಡುತ್ತಿರುವುದಾಗಿ ಹೇಳಿದರು.

Facebook Comments