ಪಂಚಾಯತ್ ಫೈಟ್ : ಚುನಾವಣಾ ಕಣದಲ್ಲಿ ಪತ್ನಿ-ಪತಿ, ಅತ್ತಿಗೆ- ಭಾಮೈದ…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.17- ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ಈ ಬಾರಿ ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಏಕೆಂದರೆ, ಈ ಬಾರಿಯೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪತ್ನಿ ವಿರುದ್ಧ ಪತಿ,ಅತ್ತಿಗೆ ವಿರುದ್ಧ ಭಾಮೈದುನ ಒಂದೇ ಕುಟುಂಬದವರು ಹೀಗೆ ಹತ್ತು ಹಲವು ನಿದರ್ಶನಗಳಿಗೆ ಈ ಚುನಾವಣೆ ಸಾಕ್ಷೀಯಾಗಿದೆ. ಅಧಿಕಾರದ ದಾಹದ ಮುಂದೆ ರಕ್ತ ಸಂಬಂಧಗಳು ನಗಣ್ಯ ಎಂಬುದು ಮತ್ತೊಮ್ಮೆ ದೃಡಪಟ್ಟಿದೆ.

ಕೊಡಗಿನಲ್ಲಿ ಗಂಡನ ವಿರುದ್ಧವೇ ಹೆಂಡತಿ ಸ್ಫರ್ಧೆಗಿಳಿಯುವ ಮೂಲಕ ಗಮನ ಸೆಳೆದಿದ್ದಾಳೆ. ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮ ಪಂಚಾಯತಿಯಲ್ಲಿ ಇಂತಹ ಅಪರೂಪದ ಸ್ಫರ್ಧಾಳುಗಳು ಕಣದಲ್ಲಿದ್ದಾರೆ. ಪಂಚಾಯತಿಯ 2ನೇ ವಾರ್ಡ್ ಆದ ಕಂಬಿಬಾಣೆಯಲ್ಲಿ ಕಿಶೋರ್ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಅದೇ ವಾರ್ಡಿನಿಂದಲೇ ಅವರ ಪತ್ನಿ ಶ್ರೀಜಾ ಕೂಡ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಈ ಮೂಲಕ 22ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಗಂಡ-ಹೆಂಡತಿ ಇಬ್ಬರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇಬ್ಬರೂ ಒಂದೇ ವಾರ್ಡಿನಿಂದ ಸ್ಪರ್ಧಿಸಿರುವ ಬಗ್ಗೆ ಪ್ರಶ್ನಿಸಿದರೆ, ಮನೆಯಲ್ಲಿ ಅಷ್ಟೇ ನಾವು ಪತಿ-ಪತ್ನಿ. ಹೊರಗೆ ಚುನಾವಣಾ ಕಣದಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳು. ಜನರಿಗೆ ಯಾರ ಮೇಲೆ ಒಲವಿದೆಯೋ ಅವರಿಗೆ ಮತ ಹಾಕಿ ಗೆಲ್ಲಿಸುತ್ತಾರೆ. ಇಬ್ಬರಲ್ಲಿ ಯಾರು ಗೆದ್ದರೂ ಸಂತೋಷವೇ. ಜನರಿಗೆ ಯಾರು ಬೇಕಾಗಿದ್ದಾರೋ ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ನಾವಿಬ್ಬರು ಪ್ರಾಮಾಣಿಕವಾಗಿ ಮತಯಾಚನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಭ್ಯರ್ಥಿ ಕಿಶೋರ್.

ಮತ್ತೊಂದು ವಿಶೇಷವೆಂದರೆ ಇಬ್ಬರು ಒಟ್ಟೊಟ್ಟಿಗೆ ಹೋಗಿ ಮತಯಾಚನೆ ಮಾಡುತ್ತಿದ್ದು, ಇಬ್ಬರು ನಮಗೆ ಮತ ನೀಡಿ ಎಂದು ಕೇಳುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡುಪುರ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಗೆ ಒಂದೇ ಕುಟುಂಬದ ಮೂವರು ಪ್ರತ್ಯೇಕ ವಾಡ್ರ್ನಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.  ಪಾಂಡುಪುರ ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯತಿಯ ಹರಹಳ್ಳಿ ಗ್ರಾಮದ ಒಂದೇ ಕುಟುಂಬದ ಪತಿ, ಪತ್ನಿ ಮತ್ತು ಪುತ್ರ ಪ್ರತ್ಯೇಕವಾಗಿ ಮೂರು ವಾಡ್ರ್ಗಳಲ್ಲಿ ಸ್ಪರ್ಧೆ ಮಾಡಲು ನಾಮಪತ್ರ ಸಲ್ಲಿಸಿದ್ದಾರೆ.

ಹರಳಹಳ್ಳಿ ಗ್ರಾಮದ 1ನೇ ವಾಡ್ರ್ನ ಸಾಮಾನ್ಯ ಮೀಸಲಾತಿಗೆ ಅಂಬರೀಷ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಅಂಬಿ ಸುಬ್ಬಣ್ಣ ಸ್ಪರ್ಧಿಸಿದ್ದರೆ, ಇವರ ಪತ್ನಿ ಸುಮಿತ್ರ ಸುಬ್ಬಣ್ಣ ವಿಶ್ವೇಶ್ವರನಗರ ಬಡಾವಣೆಯ 3ನೇ ವಾಡ್ರ್ನ ಬಿಸಿಎಂ ಮಹಿಳೆ ಮೀಸಲು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿದ್ದಾರೆ. ಇನ್ನು ಅಂಬಿ ಸುಬ್ಬಣ್ಣ ಅವರ ಪುತ್ರ ಎಸ್.ಅಭಿಷೇಕ್ ಸುಬ್ಬಣ್ಣ ಹರಳಹಳ್ಳಿ ಗ್ರಾಮದ 2ನೇ ವಾಡ್ರ್ನ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

# ನಾಮಪತ್ರ ಸಲ್ಲಿಸುತ್ತಿರುವ ಸ್ಪರ್ಧಾಳುಗಳು
ಹರಳಹಳ್ಳಿ ಗ್ರಾಮದ ತಮ್ಮ ನಿವಾಸದಿಂದ ಕುಟುಂಬ ಸಮೇತರಾಗಿ ಮೂವರು ಒಟ್ಟಿಗೆ ಹೊರಟು ಮಾರಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಕೆನ್ನಾಳು ಗ್ರಾಮ ಪಂಚಾಯತಿಗೆ ತೆರಳಿ ಚುನಾವಣಾಧಿಕಾರಿಯೂ ಆದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸೌಮ್ಯ ಅವರಿಗೆ ಅಂಬಿ ಸುಬ್ಬಣ್ಣ ಕುಟುಂಬದ ಮೂವರು ನಾಮಪತ್ರ ಸಲ್ಲಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಧಾರವಾಡ ಜಿಲ್ಲೆಯಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವಾರ್ಡ್ ನಂಬರ್ 2 ರಲ್ಲಿ ಒಂದೇ ಕುಟುಂಬದ ಮಾವ ಹಾಗೂ ಸೊಸೆ ಸ್ಪರ್ಧೆಗೆ ಇಳಿದಿದ್ದಾರೆ. ಬಸವರಾಜ್ ಯೋಗಪ್ಪನವರ್ ಸಾಮಾನ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ್ರೆ ಬಸವರಾಜ್ ಅವರ ಸಹೋದರನ ಪತ್ನಿ (ಸೊಸೆ) ವಿಶಾಲ ಯೋಗಪ್ಪನವರ್ ಬ ವರ್ಗದ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.  ಮಾವ-ಸೊಸೆ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸುತ್ತಿಲ್ಲ. ಬೇರೆ ಬೇರೆ ಅಭ್ಯರ್ಥಿಗಳ ಎದುರು ಕಣಕ್ಕೆ ಇಳಿಯುವ ಮೂಲಕ ಗಮನ ಸೆಳೆದಿದ್ದಾರೆ.

ಇನ್ನೊಂದಡೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಪಂಚಾಯಿತಿ ಸದಸ್ಯೆ ಅಶ್ವಿನಿ ಪಾಟೀಲ್ ಮರಳಿ ಗ್ರಾಮ ಪಂಚಾಯಿತಿಗೆ ಉಮೇದುವಾರಿಕೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ತಾಲ್ಲೂಕಿನ ನಗರ ಕ್ಷೇತ್ರದ ಬಿಜೆಪಿ ಸದಸ್ಯೆಯಾದ ಅಶ್ವಿನಿ ಪಾಟೀಲ್ ಬುಧವಾರ ಇಲ್ಲಿನ ಕರಿಮನೆ ಗ್ರಾಮದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಅಶ್ವಿನಿ ಪಾಟೀಲ್ 2014ರಲ್ಲೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಕಂಡಿದ್ದರು. ನಂತರ ಎದುರಾದ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನಗರ ಕ್ಷೇತ್ರದಿಂದ ಗೆದ್ದು ತಾಲ್ಲೂಕು ಪಂಚಾಯಿತಿ ಸದಸ್ಯೆ ಆದರು. ಇದೀಗ ಮತ್ತೆ ಗ್ರಾಮ ಪಂಚಾಯಿತಿ ಸ್ಥಾನಕ್ಕೆ ಆಯ್ಕೆ ಬಯಸಿ ಕಣಕ್ಕೆ ಇಳಿದಿದ್ದಾರೆ.

¿ಜನಸೇವೆ ಮಾಡುವಲ್ಲಿ ಗ್ರಾಮ ಪಂಚಾಯತಿ ಸೂಕ್ತ ವೇದಿಕೆ ಆಗಿದೆ. ಇಲ್ಲಿನ ಜನರ ನಾಡಿಮಿಡಿತ ಅರಿತು ಸ್ಥಳೀಯವಾಗಿ ಉತ್ತಮ ಕೆಲಸ ಮಾಡಲು ಸಾಧ್ಯವಿದೆ. ಅಲ್ಲದೆ ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ. ಇದರಲ್ಲಿ ಅಧಿಕಾರದ ಆಸೆ ಇಲ್ಲ¿ ಎಂದು ಅಶ್ವಿನಿ ಪಾಟೀಲ್ ತಿಳಿಸಿದರು.

ಮತದಾನ ಹಕ್ಕು ಮೊಟಕು: ಈ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದು, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ನಂತರ ಗ್ರಾಮ ಪಂಚಾಯಿತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರದ ಕಾರಣ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಅಶ್ವಿನಿ ಪಾಟೀಲ್ ಅವರಿಗೆ ಮತದಾನ ಹಕ್ಕು ಮೊಟಕುಗೊಂಡಿತ್ತು.

ಈ ಬಗ್ಗೆ ಆಕ್ಷೇಪ ಸಲ್ಲಿಸಿ ಹೈಕೋರ್ಟ್ ಮೊರೆಹೋಗಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಜಿ. ಚಂದ್ರಮೌಳಿ ಅಧ್ಯಕ್ಷ ಚುನಾವಣೆ ವೇಳೆ ಮತದಾನ ಹಕ್ಕು ನಿರ್ಬಂಧಿಸಿ ಆದೇಶ ತಂದಿದ್ದರು. ಇದರಿಂದ ವಿಚಲಿತಗೊಂಡ ಅಶ್ವಿನಿ ಅಧ್ಯಕ್ಷರ ಚುನಾವಣೆಯಲ್ಲಿ ಚಂದ್ರಮೌಳಿ ಅವರಿಗೆ ಬೆಂಬಲ ಸೂಚಿಸುವುದಾಗಿ ಸಿಂಗದೂರು ದೇವಿ ಹೆಸರಿನಲ್ಲಿ ಆಣೆ ಮಾಡಿದ್ದರು ಎನ್ನಲಾಗಿದೆ.

ನಂತರ ಎರಡನೇ ಅವಧಿಯ ಅಧ್ಯಕ್ಷರ ಚುನಾವಣೆಯಲ್ಲಿ ಈ ಆಣೆ ಪ್ರಮಾಣ ದೊಡ್ಡ ಸುದ್ದಿ ಆಗಿತ್ತು. ಕೊನೆಗೆ ಅಶ್ವಿನಿ ಪಾಟೀಲ್ ಪಕ್ಷದ ಒತ್ತಡಕ್ಕೆ ಮಣಿದು ಬಿಜೆಪಿ ಅಭ್ಯರ್ಥಿ ಆಲುವಳ್ಳಿ ವೀರೇಶ್ಗೆ ಮತ ಚಲಾಯಿಸಿದ್ದರು. ಆಗ ಮತ್ತೆ ಪ್ರಕರಣ ದೇವಸ್ಥಾನದ ಮೆಟ್ಟಿಲೇರಿ ಕೌತುಕ ಮೂಡಿಸಿತ್ತು.

Facebook Comments