ಗೌರಿಬಿದನೂರು ತಾಲೂಕಿನ ಸೊನಗಾನಹಳ್ಳಿಯಲ್ಲಿ ಮಿಡತೆಗಳು ಪ್ರತ್ಯಕ್ಷ..!

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಮೇ 30- ತಾಲೂಕಿನ ಹೊಸೂರು ಹೋಬಳಿಯ ಸೊನಗಾನಹಳ್ಳಿ ಗ್ರಾಮದಲ್ಲಿ ಹೊಲವೊಂದರಲ್ಲಿ ಬಣ್ಣ ಬಣ್ಣದ ಮಿಡತೆಗಳ ಹಿಂಡು ಹಿಂಡಾಗಿ ಕಾಣಿಸಿಕೊಂಡಿರುವ ಸುದ್ದಿ ಹರುಡುತ್ತಿದ್ದಂತೆಯೇ ತಾಲೂಕಿನಾದ್ಯಂತ ರೈತರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಮಿಡತೆಗಳು ರಾಜಸ್ತಾನ ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಭಾರೀ ಬೆಳೆಹಾನಿ ಮಾಡಿವೆ ಎಂದು ರೈತರು ಮತನಾಡಿಕೊಳ್ಳುತ್ತಿದ್ದಾರೆ. ಇಷ್ಟು ದಿನಗಳು ಲಾಕ್‍ಡೌನ್ ಸಮಸ್ಯೆಗಳಿಂದ ಬಳಲಿ ಬೆಂಡಾಗಿದ್ದೇವೆ. ಇದೀಗ ಮಿಡತೆ ಕಾಟದಿಂದ ತಲೆ ಮೇಲೆ ಕೈಹೊತ್ತು ಕುಳಿತು ಕೊಳ್ಳುವಂತಾಯಿತೇ ಎಂದು ರೈತರ ಅಸಮಾಧಗೊಂಡಿದ್ದಾರೆ.

ತಾಲೂಕಿನಾದ್ಯಂತ ಮಿಡತೆಗಳ ವಿಚಾರವೇ ಚರ್ಚೆಗೆ ಗ್ರಾಸವಾಗಿದೆ. ಆತಂಕ ಬೇಡ: ತಾಲೂಕಿನ ಹೊಸೂರು ಹೋಬಳಿಯ ಸೊನಗಾನಹಳ್ಳಿಯಲ್ಲಿ ಕಾಣಿಸಿಕೊಂಡಿರುವುದು ಎಕ್ಕೆ ಗಿಡದ ಮಿಡತೆಗಳಾಗಿವೆ. ಮಹಾರಾಷ್ಟ್ರ ಇತರೆ ಕಡೆಗಳಲ್ಲಿ ಕಾಣಿಸಿಕೊಂಡಿರುವ ಮಿಡತೆಗಳು ಮರುಭೂಮಿ ಮಿಡತೆಗಳಾಗಿವೆ.

ಇವುಗಳಿಂದ ಬೆಳೆಗೆ ಹಾನಿ ಖಚಿತ. ಆದರೆ, ಎಕ್ಕೆ ಮಿಡತೆ (ಬಣ್ಣ ಬಣ್ಣದ ಮಿಡತೆ) ಗಳು ರೈತರಿಗೆ ಹೆಚ್ಚು ಸಹಕಾರಿ ಈ ಮಿಡತೆಗಳು ಹೊಲದಲ್ಲಿನ ಕಳೆಯನ್ನು ನಾಶ ಮಾಡುತ್ತವೆ. ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎನ್.ಮಂಜುನಾಥ್ ರೈತರಿಗೆ ಅಭಯ ನೀಡಿದ್ದಾರೆ.

ಕೋಲಾರ ಜಿಲ್ಲೆಯ ದೊಡ್ಡಹರಾಳ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಮಿಡತೆಗಳು ಸಹಾ ಎಕ್ಕೆ ಗಿಡದ ಮಿಡತೆಗಳಾಗಿವೆ. ಉತ್ತರ ಭಾರತದಲ್ಲಿ ಕಾಣಿಸಿಕೊಂಡಿರುವ ಮಿಡತೆಗಳಿಗೂ ಇಲ್ಲಿ ಕಾಣಿಸಿ ಕೊಂಡಿರುವ ಮಿಡತೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರೀಯ ಸಮಗ್ರ ಕೀಡ ನಿರ್ವಹಣಾ ಕೇಂದ್ರದ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ತಾಲೂಕಿನಾದ್ಯಂತ ಮಿಡತೆ ದಾಳಿ ಎದುರಿಸಲು ಕೃಷಿ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳಿಗೆ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಎನ್.ಮಂಜುನಾಥ್ ತಿಳಿಸಿದ್ದಾರೆ.

Facebook Comments