1,400 ಕಿ.ಮೀ. ಹಸಿರು ಗೋಡೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.9- ಅರಣ್ಯ ನಾಶ ತಡೆಗಟ್ಟಿ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಗುಜರಾತ್‍ನಿಂದ ದೆಹಲಿ-ಹರಿಯಾಣ ಗಡಿವರೆಗೆ 1400 ಕಿ.ಮೀ. ಗ್ರೀನ್‍ವಾಲ್ (ಹಸಿರು ಗೋಡೆ) ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಗೊಳಿಸುವ ಗಂಭೀರ ಚಿಂತನೆಯಲ್ಲಿ ಕೇಂದ್ರ ಸರ್ಕಾರ ತೊಡಗಿದೆ.

ಪೋರ ಬಂದರಿನಿಂದ ಪಾಣಿಪತ್‍ವರೆಗೆ 1400ಕಿ.ಮೀ. ಉದ್ದ ಮತ್ತು 5ಕಿ.ಮೀ. ಅಗಲದ ದಟ್ಟ ಹಸಿರು ಪ್ರದೇಶ ಸೃಷ್ಟಿಸುವ ಯೋಜನೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಸದ್ಯದಲ್ಲೇ ಚಾಲನೆ ನೀಡುವ ನಿರೀಕ್ಷೆ ಇದೆ.  ಆಫ್ರಿಕಾದ ಡಖರ್ (ಸೆನೆಗಲ್)ನಿಂದ ಜಿಬೌಟಿ ನಡುವೆ ನಿರ್ಮಾಣವಾಗಿರುವ ಗ್ರೇಟ್ ಗ್ರೀನ್‍ವಾಲ್ ಮಾದರಿಯಲ್ಲೇ ಭಾರತದಲ್ಲಿ ಹಸಿರು ಗೋಡೆ ನಿರ್ಮಿಸುವ ಮೂಲಕ ಜಾಗತಿಕ ತಾಪಮಾನ ಮತ್ತು ಅರಣ್ಯ ಅವನತಿ ತಡೆಗಟ್ಟುವುದು ಇದರ ಉದ್ದೇಶವಾಗಿದೆ.

ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯ ನಡುವೆ ಹಬ್ಬಿರುವ ಅರಾವಳಿ ಪರ್ವತಸ್ತೋಮದ ಅರಣ್ಯ ಪ್ರದೇಶಗಳು ಈಗಾಗಲೇ ನಾಶವಾಗಿದ್ದು, ಹಸಿರು ಕಣ್ಮರೆಯಾಗುತ್ತಿದೆ.  ಈ ಪ್ರದೇಶದಲ್ಲಿ ಹಸಿರನ್ನು ಪುನಶ್ಚೇತನಗೊಳಿಸುವ ಉದ್ದೇಶದೊಂದಿಗೆ ಗ್ರೀನ್‍ವಾಲ್ ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಈ ಯೋಜನೆ ಇನ್ನೂ ಶೈಶಾವಸ್ಥೆಯಲ್ಲೇ ಇದೆ. ಆದರೆ, ಈ ಯೋಜನೆ ಸದ್ಯದಲ್ಲೇ ಸ್ಪಷ್ಟರೂಪ ಪಡೆಯಲಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಅರಣ್ಯ ನಾಶ ತಪ್ಪಿ ಹಸಿರು ವೃದ್ಧಿಯಾಗುವುದರ ಜತೆಗೆ ಪೂರ್ವಭಾಗದಿಂದ ನಗರಗಳ ಮೇಲೆ ಅಪ್ಪಳಿಸುವ ಧೂಳಿನ ಚಂಡಮಾರುತ ಮತ್ತು ಥಾರ್ ಮರುಭೂಮಿ ವಿಸ್ತರಣೆಯಾಗುವುದು ಸಹ ತಪ್ಪಲಿದೆ.

Facebook Comments