ಮುಸುಕಿನ ಜೋಳಕ್ಕೆ ಹಸಿರು ಹುಳುಗಳ ಕಾಟ

ಈ ಸುದ್ದಿಯನ್ನು ಶೇರ್ ಮಾಡಿ

musukina-Jola

ಬೇಲೂರು, ಜು.3- ಉತ್ತಮ ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಮುಸುಕಿನ ಜೋಳ ಉತ್ತಮವಾಗಿ ಬೆಳೆದಿದೆ. ಆದರೆ ಹಸಿರು ಹುಳುಗಳ ಕಾಟದಿಂದಾಗಿ ಜೋಳದ ಎಲೆ ಹಾಗೂ ಸುರುಳಿಯನ್ನು ತಿಂದು ಹಾಕುತ್ತಿರು ವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಾಂತಾಗುತ್ತದೋ ಎಂಬ ಆತಂಕದಲ್ಲಿ ರೈತರಿದ್ದಾರೆ.
ತಾಲ್ಲೂಕಿನಲ್ಲಿ ಅತಿ ಮುಖ್ಯವಾಗಿ ರೈತರ ವಾಣಿಜ್ಯ ಬೆಳೆಗಳಲ್ಲಿ ಪ್ರಮುಖವಾಗಿ ಮುಸುಕಿನ ಜೋಳವನ್ನು ಬೆಳೆಯುತ್ತಾರೆ. ಬೇಲೂರು ತಾಲೂಕಿನಲ್ಲಿ ಪ್ರತಿ ವರ್ಷದಂತೆ 2018-19ನೆ ಸಾಲಿನಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಲಾಗಿತ್ತು. ಆದರೆ ಈ ಬಾರಿ ರೈತರು ಆಲೂಗಡ್ಡೆ ಬೆಳೆಯತ್ತ ಹೆಚ್ಚು ಹೊರಳಿದ್ದರಿಂದ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದ್ದು, ಬೆಳೆಯೂ ಉತ್ತಮವಾಗಿ ಎಲ್ಲಾ ಭಾಗದಲ್ಲೂ ಸದೃಢವಾಗಿ ಬೆಳೆದಿದೆ. ಆದರೆ ಮುಸುಕಿನ ಜೋಳಕ್ಕೆ ಹಸಿರು ಹುಳುವಿನ ಬಾಧೆಯಿಂದ ಬೆಳೆ ಸಂಪೂರ್ಣ ಹಾಳಾಗುವ ಸ್ಥಿತಿಗೆ ತಲುಪುತ್ತಿದೆ.
ಮುಸುಕಿನ ಜೋಳದ ಬೆಳೆಗೆ ಬಾಧಿಸುವ ಹಸಿರು ಹುಳುಗಳು ಗಿಡದ ಎಲೆ ಸುರಳಿಯನ್ನು ಸಂಪೂರ್ಣವಾಗಿ ತಿಂದು ಹಾಕುತ್ತಿದ್ದು, ಹುಳುಗಳ ಹಾವಳಿ ಸುತ್ತಮುತ್ತಲಿನ ಪ್ರದೇಶಕ್ಕೂ ಹರಡುವ ಭೀತಿ ಕಾಡುತ್ತಿದೆ.

ಇದರಿಂದ ಮುಸುಕಿನ ಜೋಳ ಬೆಳೆದ ರೈತರಿಗೆ ದಿಕ್ಕು ತೋಚದಂತಾಗಿದೆ. ರೈತರೇ ಹೇಳುವಂತೆ ಇದೇ ಪ್ರಥಮ ಬಾರಿಗೆ ಜೋಳದ ಬೆಳೆಯಲ್ಲಿ ಹಸಿರು ಹುಳುಗಳ ಕಾಟ ಕಾಣಿಸಿಕೊಂಡಿದ್ದು, ಈ ಬೆಳೆಗೆ ರಸಗೊಬ್ಬರ ಹೊರತು ಪಡಿಸಿ ಯಾವುದೇ ಕ್ರಿಮಿನಾಶಗಳನ್ನು ನಾವುಗಳು ಇಲ್ಲಿಯ ತನಕ ಸಿಂಪರಣೆ ಮಾಡಿಲ್ಲ.
ನಮ್ಮ ಗ್ರಹಚಾರಕ್ಕೆ ಔಷಧಿ ಸಿಂಪಡಣೆ ಮಾಡಬೇಕಾದ ಅನಿವಾರ್ಯತೆ ಕಾಣುತ್ತಿದೆ. ಮುಸುಕಿನ ಜೋಳದಲ್ಲಿ ಹುಳುಗಳ ಕಾಟ ಕಾಣಿಸಿಕೊಂಡ ದಿನದಿಂದ ಕೃಷಿ ಇಲಾಖೆ ಅಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕ ಮಾಡಿದರೂ ಅವರು ಸಿಗುತ್ತಿಲ್ಲ. ಅಲ್ಲದೆ ರೈತರು ತಮ್ಮ ಜಮೀನಿನಲ್ಲಿ ಏನು ಬೆಳೆದಿದ್ದಾರೆ ಎಂಬ ಮಾಹಿತಿಗಾಗಿ ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡುತ್ತಿಲ್ಲ. ಕೇವಲ ಎಸಿ ರೂಂನಲ್ಲಿ ಕುಳಿತು ಲೆಕ್ಕಾಚಾರ ಮಾಡುತ್ತಾರೆ ಎಂದು ರೈತ ತಿಮ್ಮನಹಳ್ಳಿಯ ರಾಜಣ್ಣ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Facebook Comments

Sri Raghav

Admin