ನಾಡಹಬ್ಬ ವಿಜಯದಶಮಿಗೆ ಸಿಎಂ ಸೇರಿದಂತೆ ಗಣ್ಯರಿಂದ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.14- ನಾಡಹಬ್ಬ ವಿಜಯದಶಮಿಗೆ ಮುಖ್ಯಮಂತ್ರಿ ಸೇರಿದಂತೆ ಮತ್ತಿತರ ಗಣ್ಯರು ನಾಡಿನ ಜನತೆಗೆ ಶುಭ ಕೋರಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ , ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸೇರಿದಂತೆ ಅನೇಕ ಗಣ್ಯರು ಆಯುಧಪೂಜೆ ಮತ್ತು ಮಹಾನವಮಿ ಹಬ್ಬದ ಶುಭಾಶಯ ಕೋರಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಟ್ವೀಟ್ ಮಾಡಿ, ನಾಡಿನ ಸಮಸ್ತ ಜನತೆಗೆ ಆಯುಧಪೂಜೆ ಹಾಗೂ ಮಹಾನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡಿನ ಅಧಿ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಸರ್ವರಿಗೂ ಸುಖ- ಶಾಂತಿ, ಸಮೃದ್ಧಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ, ಜಗನ್ಮಾತೆಯ ಆರಾಧನೆಯ ಜೊತೆಗೆ, ನಮ್ಮನ್ನು ಸಲಹುವ, ನೆರವು ನೀಡುವ, ರಕ್ಷಿಸುವ ವಸ್ತು ವಿಶೇಷಗಳಲ್ಲಿ ದೇವರನ್ನು ಪೂಜಿಸುವ ಆಯುಧಪೂಜೆಯ ಈ ದಿನವು ಎಲ್ಲರ ಬಾಳಿನಲ್ಲಿ ಮಂಗಳ ಉಂಟು ಮಾಡಲಿ ಎಂದು ಟ್ವೀಟ್ ಮಾಡಿದ್ದಾರೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ದುಷ್ಟರ ನಾಶ, ಸಜ್ಜನರ ರಕ್ಷಣೆಯ ಸಂದೇಶ ಸಾರುವ ಮಹಾನವಮಿ ಮತ್ತು ವೃತ್ತಿಗೌರವದ ಪ್ರತೀಕವಾಗಿರುವ ಆಯುಧಪೂಜೆಯನ್ನು ಅರ್ಥಪೂರ್ಣವಾಗಿ ನಮ್ಮ ಬದುಕಿನಲ್ಲಿ ಆಚರಿಸೋಣ. ನಾಡ ಬಾಂಧವರೆಲ್ಲರಿಗೆ ದಸರಾ ಹಬ್ಬದ ಶುಭ ಹಾರೈಕೆಗಳು ಎಂದು ಟ್ವೀಟ್‍ನಲ್ಲಿ ಶುಭ ಕೋರಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ತಾಯಿ ಚಾಮುಂಡೇಶ್ವರಿಯನ್ನು ಭಕ್ತಿಪೂರ್ವಕವಾಗಿ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.

Facebook Comments