ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿ : ಫಾರ್ಮುಲಾ ಒನ್ ರೇಸರ್ ರೋಮೈನ್ ಪಾರು
ಬಹರೈನ್, ಡಿ.1- ಫಾರ್ಮುಲಾ ಒನ್ ರೇಸ್ ವೇಳೆಯೇ ಎರಡು ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ರೇಸರ್ ರೋಮೈನ್ ಗ್ರಾಸ್ಜೀನ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಹರೈನ್ ಫಾರ್ಮುಲಾ ರೇಸ್ನ ವೇಳೆ ಗ್ರಾಸ್ಜೀನ್ ಅವರು ಕಾರು ರೇಸರ್ ಹಾಸ್ ಅವರ ಕಾರಿಗೆ ಡಿಕ್ಕಿ ಹೊಡೆದ ಕೆಲವೇ ಸೆಕೆಂಡ್ಗಳಲ್ಲೇ ಬೆಂಕಿ ಕಾಣಿಸಿಕೊಂಡಿತು.
ಅಪಘಾತದಲ್ಲಿ ರೋಮೈನ್ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡ ಅರಿತು ತಕ್ಷಣ ಕಾರಿನಿಂದ ಕೆಳಗಿಳಿದಿದ್ದರಿಂದ ಗ್ರಾಸ್ಜೀನ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದಾಗಿ ಗ್ರಾಸ್ಜೀನ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ರೇಸರ್ ರೋಮೈನ್ ಗ್ರಾಸ್ಜೀನ್ ಅವರಿಗೆ ಅಪಘಾತವಾದ ಸುದ್ದಿ ತಿಳಿದ ತಕ್ಷಣ ಅವರ ಅಭಿಮಾನಿಗಳು ರೋಮೈನ್ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ, ಇದಕ್ಕೆ ಪ್ರತಿಯಾಗಿ ಅಭಿಮಾನಿಗಳ ಕಾಳಜಿಯಿಂದಾಗಿ ನಾನು ಬಲು ಬೇಗ ಚೇತರಿಸಿಕೊಳ್ಳುವ ಭರವಸೆ ಇದೆ ಎಂದು ಗ್ರಾಸ್ಜೀನ್ ತಮ್ಮ ಟ್ವಿಟ್ಟರ್ನಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.