ಅಂತರ್ಜಲ ಬಳಕೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.30- ಭೂಗರ್ಭದಲ್ಲಿರುವ ಅಂತರ್ಜಲವನ್ನು ಹೊರ ತೆಗೆದು ಹೆಚ್ಚು ಬಳಕೆ ಮಾಡಿಕೊಳ್ಳುತ್ತಿರುವ ವಿಶ್ವದ 15 ದೇಶಗಳ ಪೈಕಿ ಭಾರತ ಪ್ರಥಮ ಸ್ಥಾನದಲ್ಲಿದೆ. ನ್ಯಾಷನಲ್ ಗ್ರೌಂಡ್ ವಾಟರ್ ಅಸೋಸಿಯೇಷನ್ ಜಾಗತಿಕ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ ಭೂ ಗರ್ಭದಲ್ಲಿರುವ ಜಲ ಹೆಚ್ಚು ಬಳಕೆಯಾಗುತ್ತಿರುವ ಕಚ್ಚಾವಸ್ತು ಆಗಿದೆ.

ಅದರಲ್ಲಿ ಶೇ.70ರಷ್ಟನ್ನು ಕೃಷಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅರ್ಧದಷ್ಟು ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಜಗತ್ತಿನ ಶೇ.38ರಷ್ಟು ನೀರಾವರಿ ಭೂಮಿ ಅಂತರ್ಜಲವನ್ನೇ ಅವಲಂಭಿಸಿದೆ ಎಂದು ವಿಶ್ಲೇಷಿಸಿದೆ. ಅಂತರ್ಜಲ ಭೂ ಮೇಲ್ಮೈ ಪ್ರದೇಶದಿಂದ ಎರಡು ಕಿ.ಮೀ.ಗೂ ಮೀರಿ ಕೆಳಗಿಳಿಯುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಸಂಸ್ಥೆ ತಿಳಿಸಿದೆ.

ಅಂತರ್ಜಲವನ್ನು ಹೆಚ್ಚು ಬಳಕೆ ಮಾಡುವ 15 ದೇಶಗಳ ಹೆಸರನ್ನು ಪಟ್ಟಿ ಮಾಡಿರುವ ಸಂಸ್ಥೆ ಕ್ರಮವಾಗಿ ಭಾರತ, ಚೀನಾ, ಅಮೆರಿಕ, ಪಾಕಿಸ್ತಾನ, ಇರಾನ್, ಬಾಂಗ್ಲಾದೇಶ, ಮೆಕ್ಸಿಕೋ, ಸೌದಿ ಅರೆಬಿಯಾ, ಇಂಡೋನೇಷಿಯಾ, ಟರ್ಕಿ, ರಷ್ಯಾ, ಶಿರಿಯಾ, ಜಪಾನ್, ಥೈಲ್ಯಾಂಡ್, ಇಟಲಿ ರಾಷ್ಟ್ರಗಳನ್ನು ಗುರುತಿಸಿದೆ. ಭಾರತ 2010ರ ಜನಗಣತಿಯ ಪ್ರಕಾರ 122ಕೋಟಿ ಜನಸಂಖ್ಯೆ ಹೊಂದಿದ್ದು, ಆ ವೇಳೆಗೆ 251 ಕಿ.ಮೀ. ಅಂತರ್ಜಲ ಬಳಕೆ ಮಾಡಿಕೊಂಡಿದೆ. ಅದರಲ್ಲಿ ಶೇ.89ರಷ್ಟು ನೀರಾವರಿಗೆ, ಶೇ.9ರಷ್ಟು ಗೃಹ ಬಳಕೆಗೆ, ಶೇ.2ರಷ್ಟು ಕೈಗಾರಿಕೆಗಳಿಗೆ ನೀರನ್ನು ಬಳಕೆ ಮಾಡಿಕೊಂಡಿರುವುದಾಗಿ ಸಮೀಕ್ಷೆ ಹೇಳಿದೆ.

ಚೀನಾ 134 ಕೋಟಿ ಜನಸಂಖ್ಯೆ ಹೊಂದಿದ್ದು, 111.95 ಕಿ.ಮೀ. ಅಂತರ್ಜಲವನ್ನು ಬಳಕೆ ಮಾಡಿಕೊಂಡಿದೆ. ಶೇ.54ರಷ್ಟನ್ನು ನೀರಾವರಿಗೆ, ಗೃಹ ಬಳಕೆಗೆ ಶೇ.20ರಷ್ಟು, ಕೈಗಾರಿಕೆಗಳಿಗೆ ಶೇ.26ರಷ್ಟನ್ನು ಬಳಕೆ ಮಾಡಿಕೊಂಡಿದೆ. ಜಪಾನ್ 10.94 ಕಿ.ಮೀ. ಅಂತರ್ಜಲ ಬಳಕೆ ಮಾಡಿದ್ದು, ನೀರಾವರಿಗೆ ಶೇ.23ರಷ್ಟು, ಗೃಹ ಬಳಕೆಗೆ ಶೇ.29ರಷ್ಟು, ಕೈಗಾರಿಕೆಗಳಿಗೆ ಶೇ.48ರಷ್ಟು ನೀರನ್ನು ಬಳಸಿದೆ.

ಬಾಂಗ್ಲಾದೇಶ, ಇರಾನ್, ಪಾಕಿಸ್ತಾನ, ಸೌದಿಅರೆಬಿಯಾ, ಶಿರಿಯಾ, ಇಟಲಿ ದೇಶಗಳು ನೀರಾವರಿಗೆ ಹೆಚ್ಚು ಅಂತರ್‍ಜಲ ಬಳಕೆ ಮಾಡಿದರೆ, ಚೀನಾ, ರಷ್ಯಾ, ಜಪಾನ್, ಥೈಲ್ಯಾಂಡ್ ಮತ್ತು ಇಟಲಿ ರಾಷ್ಟ್ರಗಳು ಕೈಗಾರಿಕೆಗಳಿಗೆ ಹೆಚ್ಚು ನೀರು ಬಳಕೆ ಮಾಡಿವೆ.

ಇಂಡೋನೇಷಿಯಾ, ಥೈಲ್ಯಾಂಡ್, ರಷ್ಯಾ, ಜಪಾನ್ ದೇಶಗಳು ಗೃಹ ಬಳಕೆಗೆ ಹೆಚ್ಚು ನೀರು ಬಳಸಿರುವುದಾಗಿ ವರದಿ ಹೇಳಿದೆ. ಅಂತರ್ಜಲ ಬಳಕೆ ಮಾಡುವ ಜತೆಯಲ್ಲೇ ಜಲ ಮರುಪೂರಣ ಯೋಜನೆಯಲ್ಲಿ ಬಹರೇನ್ ಪ್ರಥಮ ಸ್ಥಾನದಲ್ಲಿದೆ.

Facebook Comments