ಜು.5ರಂದು ದೇಶದ ಜನರಿಗೆ ಮೋದಿ 2.0 ಸರ್ಕಾರದಿಂದ ಕಾದಿದೆ ಭರ್ಜರಿ ಗಿಫ್ಟ್..!?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.11- ಜನರ ಜೀವನ ಮಟ್ಟ ಸುಧಾರಣೆಗಾಗಿ ಅತ್ಯಂತ ಮೃದು ಧೋರಣೆ ತಳೆದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾರ್ವಜನಿಕರ ಮೇಲಿನ ತೆರಿಗೆ ಹೊರೆಯನ್ನು ಮತ್ತಷ್ಟು ಕಡಿಮೆ ಮಾಡಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ.

ಈ ನಿಟ್ಟಿನಲ್ಲಿ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ದರ ಮತ್ತಷ್ಟು ಇಳಿಯುವ ನಿರೀಕ್ಷೆ ಇದೆ. ಕೆಲವು ರಾಜ್ಯಗಳು ಜಿಎಸ್‍ಟಿ ದರ ಇಳಿಕೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಜನರ ಜೀವನ ಮಟ್ಟ ಸುಧಾರಣೆ ಜತೆಗೆ ಉದ್ಯಮ ವಲಯದ ಚೇತರಿಕೆಗೂ ಜಿಎಸ್‍ಟಿ ದರಗಳನ್ನು ಇಳಿಕೆ ಮಾಡುವುದು ಅಗತ್ಯ ಎಂದು ವಿವಿಧ ರಾಜ್ಯ ಸರ್ಕಾರಗಳು ಪ್ರತಿಪಾದಿಸಿವೆ.

ಹೊಸ ಎನ್‍ಡಿಎ ಸರ್ಕಾರದ ಚೊಚ್ಚಲ ಬಜೆಟ್ ಜು.5ರಂದು ಮಂಡನೆಯಾಗಲಿದ್ದು, ಇದಕ್ಕೆ ಮುನ್ನ ಜಿಎಸ್‍ಟಿ ಮಂಡಳಿಯ ಮಹತ್ವದ ಸಭೆ ನಡೆಯಲಿದ್ದು, ತೆರಿಗೆ ಇಳಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಯಲಿದೆ.  ಜಿಎಸ್‍ಟಿಯ ಶೇ.28ರ ಶ್ರೇಣಿಯಿಂದ ಮತ್ತಷ್ಟು ಉತ್ಪನ್ನಗಳು ಮತ್ತು ವಸ್ತುಗಳು ಬೇರ್ಪಡುವ ಸಾಧ್ಯತೆಯಿದ್ದು, ಈ ಮೂಲಕ ತೆರಿಗೆ ದರ ಇನ್ನಷ್ಟು ಕಡಿಮೆಯಾಗಲಿದೆ.

ಜೂ.20 ಜಿಎಸ್‍ಟಿ ಮಂಡಳಿ ಸಭೆ: ಜಿಎಸ್‍ಟಿ ಮಂಡಳಿಯ ಸಭೆ ಜೂ.20ರಂದು ನಡೆಯಲಿದ್ದು, ಈ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ. ಆಟೋ ಮೊಬೈಲ್ ಸೇರಿದಂತೆ ವಿವಿಧ ವಲಯ ಮತ್ತು ಉದ್ಯಮಗಳು ಜಿಎಸ್‍ಟಿ ಇಳಿಸುವಂತೆ ಈಗಾಗಲೇ ಮನವಿ ಸಲ್ಲಿಸಿದ್ದು, ಇವೆಲ್ಲವೂ ಮಂಡಳಿ ಮುಂದೆ ಚರ್ಚೆಗೆ ಬರಲಿವೆ.

ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಈಗಾಗಲೇ ಜಿಎಸ್‍ಟಿ ದರ ಇಳಿಸಲು ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಜಿಎಸ್‍ಟಿ ದರ ಇಳಿಸುವುದರಿಂದ ಉದ್ಯಮ ವಲಯದ ಚೇತರಿಕೆಗೂ ನೆರವಾಗಲಿದೆ. ಹೀಗಾಗಿ ಜಿಎಸ್‍ಟಿ ದರ ಇಳಿಕೆ ಮಾಡುವುದು ಸೂಕ್ತ ಎಂದು ರಾಜ್ಯ ಸರ್ಕಾರಗಳು ಪ್ರತಿಪಾದಿಸಿವೆ.

ಶೇ.28ರ ಶ್ರೇಣಿಯಿಂದ ಯಾವ ಯಾವ ವಸ್ತುಗಳು ಮತ್ತು ಉತ್ಪನ್ನಗಳನ್ನು ಬೇರ್ಪಡಿಸಬಹುದು ಎಂಬ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಪ್ರಸ್ತುತ ಜಿಎಸ್‍ಟಿಯಲ್ಲಿ ಶೇ.28ರಷ್ಟು ಗರಿಷ್ಠ ತೆರಿಗೆಯ ಶ್ರೇಣಿಯಾಗಿರುವುದು ಇಲ್ಲಿ ಗಮನಾರ್ಹ.

ಕೆಲವು ರಾಜ್ಯಗಳಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತವಾಗಿದ್ದರೆ, ಇನ್ನೂ ಕೆಲವು ಪ್ರಾಂತ್ಯಗಳಲ್ಲಿ ಮಂದಗತಿಯಲ್ಲಿ ಸಾಗಿದೆ. ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಜಿಎಸ್‍ಟಿ ಕಡಿತ ಅಗತ್ಯ. ಬೇಡಿಕೆ ಕುಸಿತ ಮುಂದುವರಿದರೆ ಉದ್ಯೋಗ ಸೃಷ್ಟಿ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜಿಎಸ್‍ಟಿ ದರ ಇಳಿಕೆಯು ತೆರಿಗೆ ಸಂಗ್ರಹದ ಪ್ರಮಾಣವನ್ನು ಅವಲಂಬಿಸಿದೆ. ಕಳೆದ ಜನವರಿ-ಮಾರ್ಚ್ ತ್ರೈಮಾಸಿಕ ಗ್ರಾಹಕರ ಸರಕು ವಲಯದ ಕಂಪೆನಿಗಳ ಆದಾಯ ಇಳಿಮುಖವಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಗ್ರಾಮೀಣ ವಲಯಗಳಲ್ಲಿ ಬೇಡಿಕೆ ಮಂದಗತಿಯಲ್ಲಿ ಮುಂದುವರಿದಿತ್ತು. ಪ್ರಯಾಣಿಕರ ವಾಹನಗಳ ಮಾರಾಟ ಏಪ್ರಿಲ್‍ನಲ್ಲಿ ಶೇ.17ರಷ್ಟು ಇಳಿದಿತ್ತು. ಮಹಾರಾಷ್ಟ್ರ ಮತ್ತು ಬಿಹಾರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇದೇ ಕಾರಣಕ್ಕಾಗಿ ಆಟೋಮೊಬೈಲ್ ವಾಹನಗಳ ಮಾರಾಟಗಾರರು ನಷ್ಟ ಅನುಭವಿಸಿ ತಮ್ಮ ವಹಿವಾಟು ಬಂದ್ ಮಾಡುತ್ತಿದ್ದಾರೆ.

ಜಿಎಸ್‍ಟಿ ಶೇ.28ರ ಶ್ರೇಣಿಯ ವ್ಯಾಪ್ತಿಯಲ್ಲಿ ಸಣ್ಣ ಕಾರು ಹವಾನಿಯಂತ್ರಿತ (ಎಸಿ) ಸಾಧನ. ರೆಫ್ರಿಜರೇಟರ್, ಪ್ರೀಮಿಯಂ ಕಾರು, ಸಿಗರೇಟ್, ತಂಪು ಪಾನೀಯ, ಅತ್ಯಾಧುನಿಕ ಮೋಟಾರ್ ಸೈಕಲ್ ಮೊದಲಾದ ವಸ್ತುಗಳು ಬರುತ್ತವೆ.

ಇವುಗಳ ಮೇಲಿನ ತೆರಿಗೆಯನ್ನು ಕಡಿಮೆಗೊಳಿಸುವ ಬಗ್ಗೆ ಜಿಎಸ್‍ಟಿ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಂಡ ನಂತರ ಕೇಂದ್ರ ಬಜೆಟ್‍ನಲ್ಲಿ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin