ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಜಿ.ಟಿ.ದೇವೇಗೌಡ, ಬೇಸರ ವ್ಯಕ್ತಪಡಿಸಿದು ಯಾರ ಮೇಲೆ ಗೊತ್ತ?
ಮೈಸೂರು, ಸೆ.5- ಚುನಾವಣೆ ರಾಜಕೀಯದಿಂದ ನಿವೃತ್ತಿ ಪಡೆದು ಬಡವರ ಸೇವೆ ಮಾಡಿಕೊಂಡು ನೆಮ್ಮದಿಯಿಂದ ಇರುತ್ತೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನಿಗೆ ಉತ್ತರಾಧಿಕಾರ ಕೊಟ್ಟು, ನಾನು ಚುನಾವಣೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಆದರೆ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಪುತ್ರ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಹುಣಸೂರು ಕ್ಷೇತ್ರದಿಂದ ನನ್ನ ಮಗನನ್ನು ಸ್ಪರ್ಧಿಸುವಂತೆ ಕೇಳಿದ್ದರು ಆದರೆ ನಾನು ಬೇಡ ಎಂದಿದ್ದೇನೆ. ಅವನಿಗೆ ಬೇಕಿದ್ದರೆ ಮುಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಹೇಳಿದರು. ಹುಣಸೂರು ಉಪಚುನಾವಣೆ ನಡೆದರೆ ಜೆಡಿಎಸ್ ಸೋಲನುಭವಿಸಲಿದೆ. ಅಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.
ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ನಾನು ಕ್ಷಣಕ್ಷಣಕ್ಕೂ ಅವಮಾನ ಅನುಭವಿಸಿದೆ, ಉನ್ನತ ಶಿಕ್ಷಣ ಸಚಿವ ಸ್ಥಾನ ಬೇಡ ಎಂದು ಪದೇ ಪದೇ ಹೇಳಿದರೂ ಯಾರೂ ಕೇಳಲಿಲ್ಲ, ನನ್ನನ್ನು ಸಮಾಧಾನ ಪಡಿಸಲಿಲ್ಲ, ಕೊನೆಯವರೆಗೂ ಅದೇ ಖಾತೆಯನ್ನು ನಿರ್ವಹಿಸಿದೆ, ನಾನಾಗೆ ಸಚಿವ ಸ್ಥಾನ ಬಿಟ್ಟು ಹೋಗಲಿ ಎಂಬ ಕಾರಣಕ್ಕೆ ಆ ಖಾತೆ ಕೊಟ್ಟಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವಕ್ಕೆ ಮಾರಕವಾದವರು ರಾಜಕಾರಣಕ್ಕೆ ಬಂದು ನಮ್ಮಂತಹ ರಾಜಕಾರಣಿಗಳಿಗೆ ಮಾರಕವಾದರು ಎಂದು ಮಾರ್ಮಿಕವಾಗಿ ನುಡಿದರು. ನಾನೀಗ ಬಹಳ ಆರಾಮವಾಗಿದ್ದೇನೆ. ಯಾವ ಅವಮಾನವು ಇಲ್ಲ, ನೋವೂ ಇಲ್ಲ, ಜೆಡಿಎಸ್ ಸಂಘಟನೆ ಪಟ್ಟಿಯಲ್ಲಿ ನನ್ನ ಹೆಸರಿಲ್ಲ, ಆ ಕಾರಣ ನನ್ನ ತಲೆ ಮೇಲಿದ್ದ ದೊಡ್ಡ ಬಂಡೆ ಇಳಿದಂತಾಗಿದೆ ಎಂದರು. ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕೆಂದು ನಾನು ಬಯಸಿದೆ, ಕೊನೆವರೆಗೂ ಅವರು ಸಿಎಂ ಆಗಿರಬೇಕೆಂದು ಪ್ರಯತ್ನಪಟ್ಟೆವು. ಆದರೆ ಅದು ಫಲಿಸಲಿಲ್ಲ ಎಂದು ಹೇಳಿದರು.
ಹತ್ತಿರದಿಂದ ಡಿಕೆಶಿ ಬಲ್ಲೆ:
ಡಿ.ಕೆ.ಶಿವಕುಮಾರ್ ಇಡಿ ಬಂಧನದಲ್ಲಿರುವ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಜಿಟಿಡಿ ಈ ಮೊದಲು ಅವರು, ವಿಚಾರಣೆಗೆ ಹಾಜರಾಗಿದ್ದರು. ಈಗಲೂ ಹಾಜರಾಗಿದ್ದಾರೆ ಡಿಕೆಶಿ ಅವರನ್ನು ನಾನು ಹಿಂದಿನಿಂದಲೂ ಬಲ್ಲೆ, ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ಬಗ್ಗೆ ಗೌರವವಿದೆ. ಪೂರ್ಣ ವಿಚಾರ ಗೊತ್ತಿರುವುದುರಿಂದ ನಾನು ಏನು ಮಾತನಾಡಲಾರೆ ಎಂದು ಹೇಳಿದರು.