ಕುಮಾರಸ್ವಾಮಿ ಇನ್ನಾದರೂ ಬದಲಾಗಬೇಕು : ಜಿ.ಟಿ.ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಡಿ.11- ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಇನ್ನಾದರೂ ತಮ್ಮ ನಡೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿಯವರ ನುಡಿಯೇ ಬೇರೆ, ನಡೆಯೇ ಬೇರೆ.

ಈಗಲಾದರೂ ಅವರು ತಮ್ಮ ನಡೆಯಲ್ಲಿ ಬದಲಾವಣೆ ಮಾಡಿಕೊಳ್ಳಲಿ ಎಂದು ತಿಳಿಸಿದರು. ಅವರ ಮಾತಿನಿಂದಾಗಿಯೇ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಸೋಲುಂಟಾಗಿದೆ. ಯಾರಿಗೇ ಆಗಲಿ ಮಾತು, ನಡೆ ಒಂದೇ ರೀತಿ ಇರಬೇಕು. ಹೊರಗೊಂದು ಒಳಗೊಂದು ಇರಬಾರದು ಎಂದರು.

ವಿಶ್ವನಾಥ್ ಸೋಲಿಗೆ ಸಿಪಿವೈ ಕಾರಣ: ಎಚ್.ವಿಶ್ವನಾಥ್ ಅವರ ಸೋಲಿಗೆ ಸಿ.ಪಿ.ಯೋಗೇಶ್ವರ್ ಅವರು ಕಾರಣ. ಸಮುದಾಯದ ನಾಯಕರನ್ನು ಟೀಕಿಸಿದ್ದರಿಂದ ಒಕ್ಕಲಿಗ ಸಮುದಾಯದ ಜನ ತಿರುಗಿಬಿದ್ದರು. ಹಾಗಾಗಿ ಸಿ.ಪಿ.ಯೋಗೇಶ್ವರ್ ಅವರೇ ವಿಶ್ವನಾಥ್ ಸೋಲಿಗೆ ಕಾರಣರಾಗಿದ್ದಾರೆ ಎಂದು ಇದೇ ವೇಳೆ ಜಿಟಿಡಿ ತಿಳಿಸಿದರು.

ಈ ಹಿಂದೆ ವಿಶ್ವನಾಥ್ ಅವರನ್ನು ಗೆಲ್ಲಿಸಿದ್ದೇ ನಾನು, ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಎಂದು ಜಿಟಿಡಿ ಹೇಳಿದರು.  ವಿಶ್ವನಾಥ್ ಅವರು ನಿಮ್ಮನ್ನು ಪಕ್ಷದ್ರೋಹಿ ಎಂದು ಹೇಳಿದ್ದಾರಲ್ಲ ಎಂಬ ವರದಿಗಾರರ ಪ್ರಶ್ನೆಗೆ ನಾನು ಎಲ್ಲೂ ವಿಶ್ವನಾಥ್‍ರನ್ನು ಬೆಂಬಲಿಸುತ್ತೇನೆ ಎಂದು ಹೇಳಿರಲಿಲ್ಲ. ಅಲ್ಲದೆ ಉಪಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದೆ. ಅದರಂತೆ ನಡೆದುಕೊಂಡಿದ್ದೇನೆ. ಹೀಗಿರುವಾಗ ಪಕ್ಷದ್ರೋಹಿ ಹೇಗಾಗುತ್ತೇನೆ ಎಂದು ಪ್ರಶ್ನಿಸಿದರು.

Facebook Comments