ಪರೋಕ್ಷವಾಗಿ ದಳಪತಿಗಳಿಗೆ ಟಾಂಗ್ ಕೊಟ್ಟ ಜಿ.ಟಿ.ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.14-ಇತ್ತೀಚೆಗೆ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಅಭಿವೃದ್ದಿ ದೃಷ್ಟಿಯಿಂದ ಬಿಜೆಪಿಗೆ ಬೆಂಬಲ ನೀಡಬೇಕಿತ್ತು ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಪರೋಕ್ಷವಾಗಿ ದಳಪತಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ನಡೆದ ಉಪಚುನಾವಣೆಯಲ್ಲಿ ಆಡಳಿತ ಪಕ್ಷದ ವಿರುದ್ದ ಪ್ರತಿಪಕ್ಷ ಡಿಎಂಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಇಲ್ಲಿಯೂ ಕೂಡ ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸಬೇಕಿತ್ತೆಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಅಭಿವೃದ್ದಿ ಮಂತ್ರವನ್ನು ಜಪಿಸಿದ ಪರಿಣಾಮ ಮತದಾರರು ಆಡಳಿತಾರೂಢ ಪಕ್ಷಕ್ಕೆ ಮತ ಹಾಕಿದ್ದಾರೆ. ನನ್ನ ಪ್ರಕಾರ ಉಪಚುನಾವಣೆಯಲ್ಲಿ ಜೆಡಿಎಸ್ ತಟ್ಟಸ್ಥವಾಗಿದ್ದು ಬಿಜೆಪಿಯನ್ನು ಬೆಂಬಲಿಸಬೇಕಿತ್ತು. ಪಕ್ಷದ ವೇದಿಕೆಯಲ್ಲೂ ನಾನು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೆ ಎಂದು ಹೇಳಿದರು.

ಅಭಿವೃದ್ದಿ ದೃಷ್ಟಿಯಿಂದ ವಿಪಕ್ಷಗಳು ಬಿಜೆಪಿಗೆ ಬೆಂಬಲ ನೀಡಬೇಕು. ಉಪಚುನಾವಣೆಯಲ್ಲಿ ಯಡಿಯೂರಪ್ಪ ಸ್ಪಷ್ಟ ಜನಾದೇಶ ಪಡೆದು ತಮ್ಮ ಸರ್ಕಾರಕ್ಕೆ ಬಹುಮತ ಪಡೆದುಕೊಂಡಿದ್ದಾರೆ. ರಾಜಕೀಯ ಅಸ್ಥಿರತೆ ಕೊನೆಗೊಂಡಿದ್ದು, ಇನ್ನು ಮುಂದಾದರೂ ಅಭಿವೃದ್ದಿ ಕಾರ್ಯಗಳು ನಡೆಯಬೇಕು. ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದರು.

ಈಗಾಗಲೇ ಜೆಡಿಎಸ್‍ನಿಂದ ಸಾಕಷ್ಟು ಅಂತರ ಕಾಯ್ದುಕೊಂಡಿರುವ ಜಿ.ಟಿ.ದೇವೇಗೌಡ ಮಾತೃ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವುದು ಗುಟ್ಟಾಗಿ ಉಳಿದಿಲ್ಲ. ಅದರಲ್ಲೂ ತವರು ಜಿಲ್ಲೆ ಮೈಸೂರಿನ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಯಾರಿಗೂ ಬೆಂಬಲ ನೀಡದೆ ತಟಸ್ಥ ನೀತಿ ಅನುಸರಿಸಿದ್ದರು.

ಜೆಡಿಎಸ್‍ನಿಂದ ಹೊರಬರುವ ಆಲೋಚನೆಯಲ್ಲಿರುವ ಜಿ.ಟಿ.ದೇವೇಗೌಡ ಕಾಂಗ್ರೆಸ್ ಇಲ್ಲವೇ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಉಪಚುನಾವಣೆಗೂ ಮುನ್ನವೇ ಜಿಟಿಡಿ ವಿರುದ್ದ ಕಿಡಿಕಾರಿದ್ದರು.

Facebook Comments