ಸೋಲಿನಿಂದ ಹತಾಶರಾಗಿಲ್ಲ, ‘ದೇವೇಗೌಡರು ಮತ್ತೆ ಫೀನಿಕ್ಸ್‌ನಂತೆ ಎದ್ದು ಬರ್ತಾರೆ’ : ಜಿಟಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 25-ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದ ಮುಂದಿನ ನಾಲ್ಕು ವರ್ಷಗಳ ಕಾಲ ಉತ್ತಮ ಆಡಳಿತ ನೀಡುವಂತೆ ಸಮ್ಮಿಶ್ರ ಸರ್ಕಾರದ ಉಭಯ ಪಕ್ಷಗಳಿಗೂ ಚಾಟಿ ಬೀಸಿ ಎಚ್ಚರಿಕೆ ನೀಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾವು ಒಂದು ವರ್ಷ ಆಡಳಿತ ಪೂರೈಸಿದ್ದೇವೆ, ಇನ್ನು ನಾಲ್ಕು ವರ್ಷಗಳ ಕಾಲಾವಧಿ ಇದೆ. ಆ ಅವಧಿಯಲ್ಲಿ ಅಭಿವೃದ್ಧಿಯತ್ತ ಗಮನ ಕೊಡಲಿ ಎಂಬುದು ಜನರ ತೀರ್ಪಾಗಿದೆ ಎಂದು ಹೇಳಿದರು.

ಫಲಿತಾಂಶದಿಂದ ಜೆಡಿಎಸ್‍ನ ಯಾವ ನಾಯಕರು ಬೇಸರಗೊಂಡಿಲ್ಲ. ದೇವೇಗೌಡರು ನಿನ್ನೆಯೇ ಮುಖಂಡರ ಸಭೆ ನಡೆಸಿ ಮತ್ತೊಮ್ಮೆ ಫಿನಿಕ್ಸ್‍ನಂತೆ ಎದ್ದು ಬರುತ್ತೇನೆ ಎಂದು ಪಣತೊಟ್ಟಿದ್ದಾರೆ. ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವಾಗಲೂ ಅವರು ಇದೇ ರೀತಿ ನಿರ್ಧಾರ ಮಾಡಿದ್ದರು. ರಾಜ್ಯದ ಅಭಿವೃದ್ಧಿಗೆ ಮತ್ತೆ ಪಣತೊಟ್ಟಿದ್ದಾರೆ ಎಂದು ಹೇಳಿದರು.

ಇನ್ನು ಮಂಡ್ಯದಲ್ಲಿ ಸೋಲು ಕಂಡಿರುವ ನಿಖಿಲ್‍ಕುಮಾರಸ್ವಾಮಿ ಕೂಡ ಬೇಸರಗೊಂಡಿಲ್ಲ. ಸೋಲೇ ಗೆಲುವಿನ ಸೋಪಾನ ಎಂದು ಚಿಕ್ಕವಯಸ್ಸಿನಲ್ಲೇ ಅರ್ಥ ಮಾಡಿಕೊಂಡು ಫಲಿತಾಂಶವನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ.

ಹಾಸನದಲ್ಲಿ ಜಯಗಳಿಸಿರುವ ಪ್ರಜ್ವಲ್ ರೇವಣ್ಣ ಅವರು ದೇವೇಗೌಡರಿಗಾಗಿ ಕ್ಷೇತ್ರ ಬಿಟ್ಟುಕೊಡಲು ಮುಂದಾಗಿದ್ದರು. ಆದರೆ ಅದನ್ನು ದೇವೇಗೌಡರು ತಿರಸ್ಕರಿಸಿದ್ದಾರೆ. ನನ್ನ ಉತ್ತರಾಧಿಕಾರಿಯಾಗಿ ಹಾಸನದಲ್ಲಿ ಕೆಲಸ ಮಾಡು ಎಂದು ಆಶೀರ್ವದಿಸಿದ್ದಾರೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್-ಜೆಡಿಎಸ್‍ನ ಎಲ್ಲಾ ನಾಯಕರು ಶಕ್ತಿ ಮೀರಿ ಕೆಲಸ ಮಾಡಿದರು. ಆದರೆ ಜನತೋ ಜನಾರ್ಧನ ಎಂಬಂತೆ ಮತದಾರರು ತೀರ್ಪು ಕೊಟ್ಟಿದ್ದಾರೆ. ಅದನ್ನು ನಾವೀಗ ಒಪ್ಪಿಕೊಂಡಿದ್ದೇವೆ. ಗೆದ್ದಿರುವ ಬಿಜೆಪಿ ಅಭ್ಯರ್ಥಿಗಳಿಗೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇವೆ.

ಕೇಂದ್ರದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಮೋದಿಯವರು ಈ ಬಾರಿಯಾದರೂ ಅಭಿವೃದ್ಧಿಯತ್ತ ಗಮನಕೊಡಲಿ. ಪುಲ್ವಾಮಾ, ಸರ್ಜಿಕಲ್ ಸ್ಟ್ರೈಕ್‍ಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳನ್ನು ನಡೆಸಿದ್ದಾಗಿದೆ. ಇನ್ನು ಮುಂದಾದರೂ ಈ ಮೊದಲು ಭರವಸೆ ಕೊಟ್ಟಂತೆ 15 ಲಕ್ಷ ರೂ.ಗಳನ್ನು ಪ್ರತಿಯೊಬ್ಬರ ಖಾತೆಗೆ ಹಾಕಲಿ, ಅಭಿವೃದ್ಧಿಗೆ ಒತ್ತು ಕೊಡಲಿ. ರಾಜ್ಯದ ಬರ ಪರಿಸ್ಥಿತಿಗೆ, ಕುಡಿಯುವ ನೀರಿಗೆ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಯಂತೆ ಹಣ ನೀಡಲಿ. ರೈತರ ಕಡೆ ಗಮನ ಕೊಡಲಿ ಎಂದು ಹೇಳಿದರು.

ಲೋಕಸಭಾ ಚುನಾವಣಾ ಫಲಿತಾಂಶ ನಮಗೆ ದೊಡ್ಡ ಪಾಠ ಆಗಿದೆ. ಕೆಲವು ವಿಷಯಗಳನ್ನು ನಾನು ನೇರವಾಗಿ ಹೇಳುವಂತಿಲ್ಲ. ಮಾತನಾಡಿದರೆ ವಿವಾದಗಳಾಗುತ್ತವೆ. ರಾಜ್ಯದ ನಾಯಕರು ಕೂಡ ರಾಜಕಾರಣದ ಬಗ್ಗೆ ಯಾವ ಸಚಿವರೂ ಮಾತನಾಡಬಾರದು, ಕೇವಲ ಇಲಾಖೆ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಅದರಂತೆ ನಡೆದುಕೊಳ್ಳುತ್ತೇವೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಅಸ್ಥಿರಗೊಳಿಸುವ ಯಾವ ಪ್ರಯತ್ನಗಳೂ ಯಶಸ್ವಿಯಾಗುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ಚಿದ ಲಾಬಿ: ಈ ನಡುವೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಚಿವ ಸ್ಥಾನ ನೀಡಲು ರಾಜ್ಯದಲ್ಲಿ ನಾಲ್ಕರಿಂದ ಐದು ಮಂದಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ದೆಹಲಿ ಮೂಲಗಳ ಪ್ರಕಾರ ಈಗ ಸಂಪುಟ ಸೇರುವ ಖೋಟಾದಡಿ ಲಿಂಗಾಯತ ಸಮುದಾಯದಿಂದ ಸುರೇಶ್ ಅಂಗಡಿ, ಗದ್ದಿಗೌಡರ್, ಶಿವಕುಮಾರ್‍ಉದಾಸಿ,

ಜಿ.ಎಸ್.ಬಸವರಾಜು ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇನ್ನು ಒಕ್ಕಲಿಗ ಸಮುದಾಯದಿಂದ ಡಿ.ವಿ.ಸದಾನಂದಗೌಡ ಸಂಪುಟ ಸೇರುವುದು ನಿಶ್ಚಿತ ಎನ್ನಲಾಗುತ್ತಿದೆ. ಇದರ ನಡುವೆ ಶೋಭಾಕರಂದ್ಲಾಜೆ ಹೆಸರು ಮಹಿಳಾ ಖೋಟಾದಡಿ ಕೇಳಿ ಬರುತ್ತಿದೆ. ಇದಲ್ಲದೆ, ನಳೀನ್‍ಕುಮಾರ್ ಕಟೀಲ್, ಬಚ್ಚೇಗೌಡರ ಹೆಸರು ಕೂಡ ಪ್ರಸ್ತಾಪದಲ್ಲಿದೆ.

ಇನ್ನು ಬ್ರಾಹ್ಮಣ ಖೋಟಾದಲ್ಲಿ ಪ್ರಹ್ಲಾದ್ ಜೋಷಿ ಮತ್ತು ಅನಂತ್‍ಕುಮಾರ್ ಹೆಗಡೆ ನಡುವೆ ನೇರ ಪೈಪೆÇೀಟಿ ಇದೆ. ದಲಿತ ಖೋಟಾದಡಿ ಶ್ರೀನಿವಾಸ್ ಪ್ರಸಾದ್ ಅವರನ್ನು ಪರಿಗಣಿಸಬೇಕೆಂದು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮತ್ತಿತರ ಮುಖಂಡರು ಶಿಫಾರಸು ಮಾಡಿದ್ದಾರೆ. ಇದರ ನಡುವೆ ರಮೇಶ್ ಜಿಗಜಿಣಗಿ, ನಾರಾಯಣಸ್ವಾಮಿ ಅವರ ಹೆಸರುಗಳು ಕೂಡ ಪ್ರಸ್ತಾಪಿಸಲಾಗುತ್ತಿದೆ.

ಇವೆಲ್ಲದರ ಹೊರತಾಗಿಯೂ ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಮಣಿಸಿದ ಡಾ.ಉಮೇಶ್ ಜಾಧವ್ ಅವರಿಗೂ ಅದೃಷ್ಟ ಒಲಿಯುವ ಸಾಧ್ಯತೆಗಳಿವೆ. ಸಚಿವ ಸ್ಥಾನ ಸಿಗದಿದ್ದರೂ ಕೆಲ ಸಂಸದರಿಗೆ ರಾಷ್ಟ್ರ ಮಟ್ಟದ ನಿಗಮ ಮಂಡಳಿಗಳಲ್ಲಿ ಸ್ಥಾನ ದೊರೆಯುವ ಸಾಧ್ಯತೆಯೂ ಕೂಡ ಇದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ