“ಚುನಾವಣೆಗೆ ನಿಲ್ಲಲು ನನಗೆ ಯಾವುದೇ ಪಕ್ಷ ಆಫರ್ ನೀಡಿಲ್ಲ” : ಜಿಟಿಡಿ ಪುತ್ರ ಹರೀಶ್‍ಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ನ.17- ನನಗೂ ಹಾಗೂ ಹುಣಸೂರಿಗೆ ಅವಿನಾಭಾವ ಸಂಬಂಧವಿದೆ. ಆದರೆ ನಾನು ಈ ಬಾರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರಲಿಲ್ಲ ಮತ್ತು ಯಾವುದೇ ಪಕ್ಷದವರು ಕೂಡ ನನಗೆ ಆಫರ್ ನೀಡಿರಲಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ ಹರೀಶ್‍ಗೌಡ ಹೇಳಿದ್ದಾರೆ.

ಜನರ ಹಿತದೃಷ್ಟಿ ನನಗೆ ಮುಖ್ಯ. ಕೆಲ ಬೆಂಬಲಿಗರು ನಾನು ಸ್ಪರ್ಧಿಸಬೇಕೆಂದು ಪ್ರತಿಭಟನೆ ನಡೆಸಿದ್ದರು. ಆದರೆ ಈಗ ಅದು ಸಾಧ್ಯವಿಲ್ಲ ಎಂದು ಹೇಳಿದ್ದೇನೆ. ಅವರ ಪ್ರೀತಿ ನನ್ನ ಮೇಲಿರಲಿ. ನಾನು ಯಾರಿಗೂ ಮೋಸ ಮಾಡಲ್ಲ ಎಂದು ಭರವಸೆ ನೀಡಿದ್ದೇನೆ. ಮುಂದೆಯೂ ಅವರ ಕಷ್ಟ -ಸುಖಗಳಲ್ಲಿ ಸ್ಪಂದಿಸುತ್ತೇನೆ ಎಂದು ಹೇಳಿದ್ದೇನೆ. ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಅವರು ಸುದ್ದಿಗಾರರಿಗೆ ಅವರು ಸ್ಪಷ್ಟಪಡಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ. ಆದರೆ ಹಿಂದೆ ನಾನು ನೀಡಿದ ಹೇಳಿಕೆಯಂತೆ ತಟಸ್ಥವಾಗಿ ಇರಲು ಈಗಲೂ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. ಉತ್ತಮ ಜನಪ್ರತಿನಿಧಿಯನ್ನು ಮತ್ತು ಇಷ್ಟ ಪಟ್ಟವರನ್ನು ಆಯ್ಕೆ ಮಾಡಿ ಎಂದು ನಾನೇ ಸ್ವತಃ ಜನರಿಗೆ ಹೇಳುತ್ತೇನೆ ಎಂದು ಹರೀಶ್‍ಗೌಡ ತಿಳಿಸಿದ್ದಾರೆ.

ಇದೇ ವೇಳೆ ಶಾಸಕ ಜಿ.ಟಿ.ದೇವೇಗೌಡ ಕೂಡ ಪ್ರತಿಕ್ರಿಯೆ ನೀಡಿದ್ದು ನಾನು ಯಾವ ಪಕ್ಷದ ಪರವೂ ಇಲ್ಲ ವಿರುದ್ಧವೂ ಇಲ್ಲ ಎಂದು ಜಿ.ಟಿ.ದೇವೇಗೌಡ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ನನ್ನ ಮಗನಿಗೆ ಬಿಜೆಪಿ ಟಿಕೆಟ್ ಕೇಳಿರಲಿಲ್ಲ. ಕಳೆದ ಚುನಾವಣೆಯಲ್ಲಿ ಜನರು ನನ್ನ ಪುತ್ರ ಹಾಗೂ ನನ್ನ ಪತ್ನಿಯನ್ನು ಚುನಾವಣೆಯಲ್ಲಿ ಕಣಕ್ಕಿಳಿಸಿ ಎಂದು ಕೇಳಿದ್ದರು.

ಆದರೆ ನನ್ನ ಮಗನನ್ನು ಚುನಾವಣಾ ಕಣಕ್ಕಿಳಿಸುವ ಶಕ್ತಿ ನನ್ನಲ್ಲಿಲ್ಲ ಎಂದು ಹೇಳಿದ್ದೇನೆ. ಚುನಾವಣೆ ಎದುರಿಸಬೇಕಾದರೆ ಆರ್ಥಿಕ ಶಕ್ತಿ ಮುಖ್ಯ. ಹೀಗಾಗಿ ಉಪ ಚುನಾವಣೆಯಲ್ಲಿ ನನ್ನ ಪುತ್ರ ಸ್ಪರ್ಧಿಸಲು ಹಿಂದೇಟು ಹಾಕಿದ್ದಾನೆ ಎಂದರು.

Facebook Comments

Sri Raghav

Admin