ಒಂದೇ ಸೈಕಲ್‍ನಲ್ಲಿ ಪ್ರಪಂಚ ಸುತ್ತಿದ ಇಬ್ಬರು ಬ್ರಿಟಿಷ್ ಮಹಿಳೆಯರ ರೋಚಕ ‘ದಾಖಲೆ’ ಸ್ಟೋರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಆ.25- ಇದು ಇಬ್ಬರು ಬ್ರಿಟಿಷ್ ಮಹಿಳೆಯರ ಸಾಹಸಗಾಥೆ. ಕೊರೊನಾ ವೈರಸ್ ಹಾವಳಿ ಮತ್ತು ಪ್ರಕೃತಿ ವಿಕೋಪಗಳನ್ನು ನಿಭಾಯಿಸಿ ಈ ವನಿತೆಯರು ಒಂದೇ ಸೈಕಲ್‍ನಲ್ಲಿ ಪ್ರಪಂಚ ಪರ್ಯಟನೆ ಮಾಡಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

55 ವರ್ಷದ ಕ್ಯಾಟ್ ಡಿಕ್ಸನ್ ಮತ್ತು 54 ವರ್ಷದ ರಾಝ್ ಮಾರ್ಸ್‍ಡೆನ್ ಎಂಬ ಸಾಹಸಿಗಳು ಟಾಂಡೆಮ್ ಬೈಕ್‍ನಲ್ಲಿ ಅತ್ಯಂತ ವೇಗವಾಗಿ ವಿಶ್ವ ಪ್ರದಕ್ಷಿಣೆ ಹಾಕಿದ ವನಿತೆಯರೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಈ ಬ್ರಿಟನ್ ಮಹಿಳೆಯರು 2019ರ ಜೂನ್‍ನಲ್ಲಿ ಇಂಗ್ಲೆಂಡ್‍ನಿಂದ ಪ್ರಪಂಚ ಪರ್ಯಟನೆ ಆರಂಭಿಸಿದರು. 263 ದಿನಗಳು, 8 ಗಂಟೆಗಳು ಮತ್ತು ಏಳು ನಿಮಿಷಗಳಲ್ಲಿ ಇವರು ಸೈಕಲ್ ಮೇಲೆ ಜಗತ್ತನ್ನು ಸುತ್ತಿ ಹೊಸ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದರು.

ಇವರು ಮಹಿಳೆಯರ ವಿಭಾಗದಲ್ಲಿ ಮಾತ್ರ ದಾಖಲೆಯನ್ನು ನಿರ್ಮಿಸದೆ ಪುರುಷರ ದಾಖಲೆಯನ್ನೂ ಧೂಳೀಪಟ ಮಾಡಿ ನೂತನ ವಿಕ್ರಮ ಸಾಸಿದ್ದಾರೆ.

ಬ್ರಿಟನ್‍ನವರೇ ಆದ ಲಾಯ್ಡ್ ಎಡ್ವರ್ಡ್ ಕೋಲಿಯರ್ ಮತ್ತು ಲೂಯಿಸ್ ಪಾಲ್ ಸ್ನೇಲ್‍ಗ್ರೋವ್ ಅವರು ಪುರುಷರ ವಿಭಾಗದಲ್ಲಿ ಮಾಡಿದ್ದ ದಾಖಲೆಯನ್ನು ಕ್ಯಾಟ್ ಡಿಕ್ಸನ್ ಮತ್ತು ರಾಝ್ ಮಾರ್ಸ್‍ಡೆನ್ ಅಳಿಸಿ ಹಾಕಿದರು. ಲಾಯ್ಡ್ ಮತ್ತು ಲೂಯಿಸ್ 281 ದಿನಗಳಲ್ಲಿ ವಿಶ್ವ ಪರ್ಯಟನೆ ಮಾಡಿದ್ದರು.

ಕೊರೊನಾ ವೈರಸ್ ಹಾವಳಿ ನಡುವೆ ಭಾರೀ ಮಳೆ, ಪ್ರವಾಹ, ಕಾಡ್ಗಿಚ್ಚು ಇತ್ಯಾದಿ ಪ್ರಕೃತಿ ವಿಕೋಪಗಳನ್ನು ನಿಭಾಯಿಸಿ ತಮ್ಮ ಗುರಿ ಮುಟ್ಟುವಲ್ಲಿ ಈ ವೀರ ವನಿತೆಯರು ಸಫಲರಾಗಿದ್ದಾರೆ.

ಅಲೈಸ್ ಹೆಸರಿನ ಟಾಂಡೆಮ್ ಬೈಕ್ ಮೇಲೆ ಪ್ರತಿದಿನ 130 ರಿಂದ 160 ಕಿಲೋ ಮೀಟರ್‍ಗಳಷ್ಟು ದೂರ ನಾವು ಸವಾರಿ ಮಾಡುತ್ತಿದ್ದೆವು. ನಾವು 25 ದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದೇವೆ ಎಂದು ಬ್ರಿಟನ್ ಮಹಿಳೆಯರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇವರ ಈ ಸಾಧನೆಯು 2021ರ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗಿದೆ.

Facebook Comments

Sri Raghav

Admin