ವೇದಿಕೆ ಮೇಲೆಯೇ ಕುಸಿದು ಬಿದ್ದ ಗುಜರಾತ್ ಸಿಎಂ, ಆಸ್ಪತ್ರೆಗೆ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

ಅಹಮದಾಬಾದ್, ಫೆ.15 (ಪಿಟಿಐ)- ವಡೋದರದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತಲೆಸುತ್ತಿ ಪ್ರಜ್ಞಾ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು 24 ಗಂಟೆಗಳ ಕಾಲ ವೈದ್ಯರ ನಿಗಾದಲ್ಲಿ ಇರಿಸಲಾಗಿದೆ. ಸಿಎಂ ಆರೋಗ್ಯ ಚೆನ್ನಾಗಿದೆ. ಸ್ಪಲ್ಪ ದಣಿದಿದ್ದಾರೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ದಿನ ವೈದ್ಯ ನಿಗಾ ಘಟಕದಲ್ಲಿರಿಸಿಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ವಡೋದರದ ನಿಜಪುರ ಪ್ರದೇಶದಲ್ಲಿ ಆಯೋಜಿಸಿದ್ದ ಮುಂಬರುವ ಸ್ಥಳೀಯ ಚುನಾವಣೆಗಳ ಪ್ರಚಾರ ಕಾರ್ಯದ ರ್ಯಾಲಿಯಲ್ಲಿ ಭಾಗವಹಿಸಿ ಮುಖ್ಯಮಂತ್ರಿ ರೂಪಾನಿ (64) ಅವರು ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು ಮೂರ್ಚೆ ಹೋಗಿದ್ದಾರೆ.

ತಕ್ಷಣ ಕಾರ್ಯಕ್ರಮ ರದ್ದುಗೊಳಿಸಿ, ಅಹಮದಾಬಾದ್‍ಗೆ ಕರೆದುತಂದು ಯು.ಎನ್. ಮೆಹತಾ ಆಸ್ಪತ್ರೆಗೆ ಸೇರಿಸಲಾಗಿದೆ. ವಿಪರೀತ ಆಯಾಸ ಹಾಗೂ ನಿರ್ಜಲೀಕರಣದಿಂದಾಗಿ ರೂಪಾನಿ ಅವರು ಮೂರ್ಚೆ ಹೋಗಿದ್ದಾರೆ, ಇನ್ನಾವುದೇ ಸಮಸ್ಯೆಯಿಲ್ಲ. ಅವರ ಆರೋಗ್ಯ ಈಗ ಸುಧಾರಿಸಿದೆ. ಆದರೂ ಅವರನ್ನು 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಸುಧಾರಿಸಿಕೊಳ್ಳಲು ಸಲಹೆ ನೀಡಲಾಗಿದೆ ಎಂದು ವೈದ್ಯ ಆರ್.ಕೆ. ಪಟೇಲ್ ಹೇಳಿದ್ದಾರೆ.

ಪ್ರಧಾನಿ ಟೆಲಿಫೋನ್ ಕರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟೆಲಿಫೋನ್ ಕರೆ ಮಾಡಿ ರೂಪಾನಿ ಅವರ ಆರೋಗ್ಯ ವಿಚಾರಿಸಿದ್ದಾರೆ. ರೂಪಾನಿ ಅವರು ಸಂಪೂರ್ಣವಾಗಿ ಆರೋಗ್ಯ ತಪಾಸಣೆಗೆ ಒಳಗಾಗಿ, ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಡೋದರದ ಆರು ಮುನಿಸಿಪಲ್ ಕಾಪೆರ್ರೇಷನ್ ಚುನಾವಣೆಗಳು ಫೆ.21 ರಂದು ಹಾಗೂ ಇತರ ಮುನಿಸಿಪಾಲಿಟಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗೆ ಚುನಾವಣೆಗಳು ಫೆ.28 ರಂದು ನಡೆಯಲಿವೆ.

Facebook Comments