ರಾಹುಲ್ ಗಾಂಧಿ ಖುದ್ದು ಹಾಜರಿಗೆ ನ್ಯಾಯಾಲಯ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಸೂರತ್,ಅ.26- ಮೋದಿ ಉಪನಾಮ ಹೊಂದಿರುವವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಬೇಕೆಂದು ಸೂರತ್‍ನ ಜಿಲ್ಲಾ ನ್ಯಾಯಾಲಯ ಸೂಚನೆ ನೀಡಿದೆ. 2019ರ ಲೋಕಸಭೆ ಚುನಾವಣೆ ವೇಳೆ ರಾಹುಲ್ ಗಾಂಧಿ ಸಾರ್ವಜನಿಕ ಸಮಾವೇಶದಲ್ಲಿ ಮಾನಹಾನಿ ಹೇಳಿಕೆ ನೀಡಿದ್ದಾರೆ. ಮೋದಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ.

ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲ ಕಳ್ಳರು ಎಂದು ಕರೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಸೂರತ್‍ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ದೂರು ದಾಖಲಿಸಿದ್ದರು.2019ರ ಏಪ್ರಿಲ್‍ನಲ್ಲಿ ರಾಹುಲ್ ಗಾಂಧಿ ವಿರುದ್ದ ಐಪಿಸಿ 499 ಮತ್ತು 500ರಡಿ ಮಾನಹಾನಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುತ್ತಿರುವ ನ್ಯಾ.ಎ.ಎನ್.ಧವೆ ಅವರು ಅ.29ರಂದು ರಾಹುಲ್ ಗಾಂಧಿ ಅವರು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಬೇಕು ಎಂದು ಮೌಖಿಕವಾಗಿ ಸೂಚಿಸಿದ್ದಾರೆ. ದೂರು ದಾಖಲಿಸಿರುವ ಪೂರ್ಣೇಶ್ ಮೋದಿ ಅವರು ಭುಪೇಂದ್ರ ಪಟೇಲ್ ಅವರ ನೇತೃತ್ವದ ಗುಜರಾತ್ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

2019ರ ಏಪ್ರಿಲ್ 13ರಂದು ಕೋಲಾರ್‍ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ನೀರವ್ ಮೋದಿ, ಲಲತ್ ಮೋದಿ, ನರೇಂದ್ರ ಮೋದಿ ಈ ಹೆಸರುಗಳನ್ನು ಹೊಂದಿರುವವರೆಲ್ಲ ಕಳ್ಳರಾಗಿ ತಪ್ಪು ಮಾಡಿದ್ದಾರೆ. ಮೋದಿ ಉಪನಾಮ ಹೊಂದಿರುವವರು ಕಳ್ಳರಾಗಲು ಹೇಗೆ ಸಾಧ್ಯ ಎಂದು ಹೇಳಿಕೆ ನೀಡಿದ್ದರು.

Facebook Comments