ಎರಡು ಬಸ್ಗಳ ಮಧ್ಯೆ ಸಿಲುಕಿ ಗುಲ್ಬರ್ಗ ಮೂಲದ ಕಾರ್ಮಿಕ ಸಾವು
ಬೆಂಗಳೂರು, ಮೇ 4- ಊರಿಗೆ ತೆರಳುವ ಹುಮ್ಮಸ್ಸಿನಿಂದ ಬಸ್ ನಿಲ್ದಾಣಕ್ಕೆ ಬಂದಿದ್ದ ಗುಲ್ಬರ್ಗ ಮೂಲದ ಕಾರ್ಮಿಕ ಎರಡು ಬಸ್ಗಳ ಮಧ್ಯೆ ಸಿಕ್ಕಿ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಗಪೂರ್ (36) ಮೃತಪಟ್ಟ ಕಾರ್ಮಿಕ. ನಗರದಲ್ಲಿರುವ ವಲಸೆ ಕಾರ್ಮಿಕರನ್ನು ಸರ್ಕಾರ ಅವರವರ ಸ್ವಗ್ರಾಮಕ್ಕೆ ತೆರಳಲು ಬಸ್ ಸೌಲಭ್ಯ ಕಲ್ಪಿಸಿದ್ದರಿಂದ ಎರಡು ದಿನಗಳಿಂದ ಕಾರ್ಮಿಕರು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದರು.
ಅದರಂತೆ ಕಾರ್ಮಿಕರು ಇಂದು ಬೆಳಗ್ಗೆಯಿಂದಲೇ ಬಸ್ಗಳಲ್ಲಿ ತೆರಳುತ್ತಿದ್ದರು. ಈ ನಡುವೆ ತಮ್ಮ ಗ್ರಾಮಕ್ಕೆ ತೆರಳಲು ಗುಲ್ಬರ್ಗ ಮೂಲದ ಕಾರ್ಮಿಕ ಗಪೂರ್ ಬಿಎಂಟಿಸಿ ಬಸ್ ನಿಲ್ದಾಣದ ಪ್ಲಾಟ್ಫಾರಂ 27ರಲ್ಲಿ ನಿಲುಗಡೆಗೊಂಡಿದ್ದ ಕೆಎಸ್ಆರ್ಟಿಸಿ ಎರಡು ಬಸ್ಗಳ ಮಧ್ಯೆ ನಡೆದುಕೊಂಡು ದಾಟಲು ಮುಂದಾದರು.
ಈ ವೇಳೆ ಈತ ಬಸ್ ಮಧ್ಯೆ ಇರುವುದು ಗಮನಕ್ಕೆ ಬಾರದೆ ಚಾಲಕ ಬಸ್ ಚಲಾಯಿಸಿದಾಗ ಎರಡು ಬಸ್ಗಳ ಮಧ್ಯೆ ಸಿಕ್ಕಿಕೊಂಡು ಗಪೂರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದ ಉಪ್ಪಾರ ಪೇಟೆ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.