ರೌಡಿ ಗುಂಡನಿಗೆ ಪೊಲೀಸರ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.7- ಒಂದೇ ರಾತ್ರಿ ಮೂರು ಕಡೆ ಸರಣಿ ದರೋಡೆ ಮಾಡಿ ಪರಾರಿಯಾಗಿದ್ದ ರೌಡಿಯೊಬ್ಬ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾರ್ತಿಕ್ ಅಲಿಯಾಸ್ ಗುಂಡ (22) ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿ. ಈತ ಶ್ರೀರಾಮಪುರ ಮತ್ತು ರಾಜಾಜಿನಗರದ ರೌಡಿ ಶೀಟರ್. ಕಾರ್ತಿಕ್ ವಿರುದ್ಧ ದರೋಡೆ, ಕೊಲೆಯತ್ನ ಸೇರಿದಂತೆ 11ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಕಳೆದ ಭಾನುವಾರ ತನ್ನ ಸಹಚರ ಭದ್ರಿ ಜತೆ ಸೇರಿ ನಂದಿನಿ ಲೇಔಟ್, ಆರ್‍ಎಂಸಿ ಯಾರ್ಡ್, ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಚಾಕುವಿನಿಂದ ಇರಿದು ಸರಣಿ ದರೋಡೆ ಮಾಡಿ ಪರಾರಿಯಾಗಿದ್ದನು. ಈ ಬಗ್ಗೆ ಮೂರು ಠಾಣೆಗಳಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ವಿಭಾಗದ ಡಿಸಿಪಿ ಅವರು ದರೋಡೆಕೋರರ ಪತ್ತೆಗಾಗಿ ನಂದಿನಿ ಲೇಔಟ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ನಿತ್ಯಾನಂದ ಅವರನ್ನೊಳಗೊಂಡ ತಂಡವನ್ನು ರಚಿಸಿದ್ದರು. ಈ ತಂಡ ಕಾರ್ಯಾಚರಣೆ ಕೈಗೊಂಡು ಖಚಿತ ಮಾಹಿತಿ ಆಧರಿಸಿ ಆರೋಪಿ ಭದ್ರಿ ಅಲಿಯಾಸ್ ಚಂದ್ರ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ರೌಡಿ ಕಾರ್ತಿಕ್ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಈತನ ಹೇಳಿಕೆ ಆಧರಿಸಿ ರಾತ್ರಿ ಶ್ರೀರಾಮಪುರದ ಓಕಳಿಪುರ ಬಳಿ ರೌಡಿ ಕಾರ್ತಿಕ್ ಇರುವುದು ತಿಳಿದು ಈ ತಂಡ 11.30ರ ಸುಮಾರಿನಲ್ಲಿ ಅಲ್ಲಿಗೆ ತೆರಳಿದೆ.  ಪೊಲೀಸರು ಬಂಧಿಸಲು ಬರುತ್ತಿರುವುದನ್ನು ಗಮನಿಸಿದ ರೌಡಿ ಕಾರ್ತಿಕ್ ಏಕಾಏಕಿ ಡ್ರ್ಯಾಗನ್‍ನಿಂದ ಕಾನ್‍ಸ್ಟೆಬಲ್ ಉಮೇಶ್ ಅವರಿಗೆ ಚುಚ್ಚಿದ್ದಾನೆ. ತಕ್ಷಣ ಸಬ್‍ಇನ್ಸ್‍ಪೆಕ್ಟರ್ ನಿತ್ಯಾನಂದ ಅವರು ರೌಡಿಗೆ ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಸಿದ್ದಾರೆ.

ಸಬ್‍ಇನ್ಸ್‍ಪೆಕ್ಟರ್ ಅವರ ಮಾತಿಗೆ ಕಿವಿಗೊಡದೆ ಮತ್ತೆ ಕಾನ್‍ಸ್ಟೆಬಲ್ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ನಿತ್ಯಾನಂದ ಅವರು ಹಾರಿಸಿದ ಗುಂಡು ರೌಡಿ ಕಾರ್ತಿಕ್ ಬಲಗಾಲಿಗೆ ತಗುಲಿದಾಗ ಕುಸಿದು ಬಿದ್ದಿದ್ದಾನೆ. ಪೊಲೀಸರು ರೌಡಿ ಕಾರ್ತಿಕ್‍ನನ್ನು ಸುತ್ತುವರಿದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾರ್ಯಾಚರಣೆ ವೇಳೆ ರೌಡಿಯಿಂದ ಹಲ್ಲೆಗೊಳಗಾಗಿ ಗಾಯಗೊಂಡಿರುವ ಕಾನ್‍ಸ್ಟೆಬಲ್ ಉಮೇಶ್ ಅವರೂ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಶ್ರೀರಾಮಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments