ಕಿಡ್ನಾಪರ್’ಗೆ ಗುಂಡು ಹಾರಿಸಿ ಉದ್ಯಮಿಯ ಪುತ್ರನನ್ನು ರಕ್ಷಿಸಿದ ಬೆಂಗಳೂರು ಪೊಲೀಸರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.1- ಅಪಹರಣಕಾರನ ಮೇಲೆ ಗುಂಡು ಹಾರಿಸಿರುವ ಪೊಲೀಸರು ಕಿಡ್ನ್ಯಾಪ್ ಆಗಿದ್ದ ಹೋಟೆಲ್ ಉದ್ಯಮಿಯ ಪುತ್ರನನ್ನು ರಕ್ಷಿಸಿದ್ದಾರೆ. ಮುಬಾರಕ್ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಅಪಹರಣಕಾರ. ಆತನ ಇನ್ನಿಬ್ಬರು ಸ್ನೇಹಿತರಾದ ಅಯಾಝ್ ಮತ್ತು ಮೊಹಿನ್‍ನನ್ನು ಬಂಧಿಸಲಾಗಿದೆ.

ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಮ್ಮನಹಳ್ಳಿಯ ಹೋಟೆಲ್ ಉದ್ಯಮಿ ಜಾಕಿರ್‍ಆಲಿ ಅವರ 8ನೇ ತರಗತಿ ಓದುತ್ತಿರುವ 13 ವರ್ಷದ ಪುತ್ರ ನಿನ್ನೆ ಶಾಲೆಗೆ ಹೋಗಿ ಬಂದ ನಂತರ ಆಟವಾಡಲು ಮನೆಯಿಂದ ಹೊರ ಹೋಗಿದ್ದ. ಆದರೆ, ಸಂಜೆಯಾದರೂ ವಾಪಸ್ ಬರಲಿಲ್ಲ. ಎಲ್ಲೆಡೆ ಹುಡುಕಿ ಕೊನೆಗೆ ಸಂಜೆಯ ನಂತರ ಬಾಣಸವಾಡಿ ಠಾಣೆಗೆ ದೂರು ನೀಡಿದ್ದರು.

ಈ ನಡುವೆ ಬಾಲಕನನ್ನು ಅಪಹರಿಸಿದ್ದ ಆರೋಪಿಗಳು ಬಾಲಕನ ಬಳಿಯೇ ಇದ್ದ ಮೊಬೈಲ್‍ನಿಂದ ಜಾಕಿರ್ ಆಲಿ ಅವರಿಗೆ ಫೋನ್ ಮಾಡಿ ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ. 50 ಲಕ್ಷ ಕೊಟ್ಟರೆ ಬಿಡುತ್ತೇವೆ. ಇಲ್ಲವಾದರೆ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ. ಈ ಅಪಹರಣ ವಿಷಯ ತಿಳಿಸಿದ ತಕ್ಷಣ ಡಿಸಿಪಿ ಡಾ.ಶರಣಪ್ಪ ಅವರು ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಮತ್ತು ಬಾಣಸವಾಡಿ ಇನ್ಸ್‍ಪೆಕ್ಟರ್‍ಗಳ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.

ಈ ತಂಡಗಳು ಕಾರ್ಯಾಚರಣೆಗಿಳಿದಾಗ ಕೆ.ಜೆ.ಹಳ್ಳಿಯ ಇನ್ಸ್‍ಪೆಕ್ಟರ್ ಅಜಯ್ ಸಾರಥಿ ಅವರಿಗೆ ಖಚಿತ ಮಾಹಿತಿ ಬಂದಿದ್ದು, ಅಪಹರಣಕಾರರು ಬಾಲಕನನ್ನು ವಾಹನದಲ್ಲಿ ಕೂರಿಸಿಕೊಂಡು ನಗರದಲ್ಲಿ ಸುತ್ತುತ್ತಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಾರಾಯಿಪಾಳ್ಯಕ್ಕೆ ಬರುತ್ತಾರೆ ಎಂಬ ಮಾಹಿತಿ ಗೊತ್ತಾಗಿದೆ.ತಕ್ಷಣವೇ ಅಜಯ್‍ಸಾರಥಿ ತಮ್ಮ ತಂಡದೊಂದಿಗೆ ಅಲ್ಲಿಗೆ ಹೋಗಿ ಆರೋಪಿಗಳ ಬಂಧನಕ್ಕೆ ಪ್ರಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಆರೋಪಿ ಥಣಿಸಂದ್ರದ ಮುಬಾರಕ್ (28) ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.ಹೆಡ್‍ಕಾನ್‍ಸ್ಟೆಬಲ್ ರೇಣುಕಾನಾಯಕ್ ಅವರಿಗೆ ಗಾಯವಾಗಿದೆ. ತಕ್ಷಣ ಇನ್ಸ್‍ಪೆಕ್ಟರ್ ಅಜಯ್ ಸಾರಥಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಆರೋಪಿ ಮತ್ತೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಮುಬಾರಕ್‍ನ ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆತನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಬಂಧಿತ ಆರೋಪಿ ನೀಡಿದ ಮಾಹಿತಿ ಆಧರಿಸಿ ಇನ್ನಿಬ್ಬರು ಅಪಹರಣಕಾರರಾದ ಥಣಿಸಂದ್ರದ ಅಯಾಝ್ ಹಾಗೂ ಕಮ್ಮನಹಳ್ಳಿಯ ಮೊಹಿನ್‍ನನ್ನು (29) ಬಂಧಿಸಲಾಗಿದೆ. ಬಂಧಿತರ ಪೈಕಿ ಮೊಹಿನ್ ಅಪಹರಣಕ್ಕೊಳಗಾದ ಬಾಲಕನ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಪಹರಣಕಾರರು ಜಾಕಿರ್ ಆಲಿ ಅವರ ಸ್ನೇಹಿತನ ಮಗನನ್ನೂ ಅಪಹರಿಸಿ ಸುಮಾರು ಒಂದು ಕೋಟಿ ಹಣ ವಸೂಲಿ ಮಾಡುವ ಸಂಚು ರೂಪಿಸಿದ್ದರು ಎಂಬುದು ಸಹ ಪೆÇಲೀಸರ ತನಿಖೆಯಿಂದ ತಿಳಿದುಬಂದಿದೆ.

Facebook Comments