ಸ್ಯಾಂಡಲ್‍ವುಡ್‍ನ ಖ್ಯಾತ ಸಂಭಾಷಣೆಕಾರ ಗುರುಕಶ್ಯಪ್ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ. 14- ಕನ್ನಡ ಚಿತ್ರರಂಗದ ಖ್ಯಾತ ಸಂಭಾಷಣೆಕಾರರಾದ ಗುರುಕಶ್ಯಪ್ ಅವರು ಕಳೆದ ರಾತ್ರಿ ಹೃದಯಾಘಾತದಿಂದ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಗುರುಗೆ ನಿನ್ನೆ ತಡರಾತ್ರಿ ಹೃದಯಾಘಾತವಾಗಿತ್ತು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಅಸುನೀಗಿದ್ದಾರೆ. ಅವರ ನಿಧನಕ್ಕೆ ಸ್ಯಾಂಡಲ್‍ವುಡ್ ಸ್ಟಾರ್ ನಟರುಗಳಾದ ಶಿವರಾಜ್‍ಕುಮಾರ್, ರಘುಮುಖರ್ಜಿ, ನಿರ್ದೇಶಕ ರವೀಂದ್ರನಾಥ್, ನಟಿ ಆರೋಹಿ ನಾರಾಯಣ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದು ಅವರ ಅಂತ್ಯಕ್ರಿಯೆ ಇಂದು ನೆರವೇರಿದೆ.

2016ರಲ್ಲಿ ತೆರೆಕಂಡ ಗೋಲ್ಡನ್‍ಸ್ಟಾರ್ ಗಣೇಶ್ ಅಭಿನಯದ ಸುಂದರಾಂಗ ಜಾಣ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಗುರುಕಶ್ಯಪ್ ಅವರು ನಂತರ ರಮೇಶ್ ಅರವಿಂದ್‍ರ ಪುಷ್ಪಕವಿಮಾನ, ಪ್ರಿಯಾಂಕಾ ಉಪೇಂದ್ರ ನಟನೆಯ ದೇವಕಿ, ಗಣೇಶ್‍ರ ಗಿಮಿಕ್, ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಅವರು, 99, ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರಗಳಿಗೆ ಚಿತ್ರಕಥೆ ಒದಗಿಸಿದ್ದಾರೆ.

ಸ್ಯಾಂಡಲ್‍ವುಡ್‍ನಲ್ಲಿ ಇತ್ತೀಚೆಗೆ ಸಾಕಷ್ಟು ಬ್ಯುಜಿಯಾಗಿದ್ದ ಗುರು ಕಶ್ಯಪ್ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಬೈರಾಗಿ, ಡಾಲಿ ಧನಂಜಯ್ ನಟನೆಯ ಮಾನ್ಸೂನ್‍ರಾಗ, ವ್ಹೀಲ್‍ಚೇರ್ ರೋಮಿಯೋ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದು ಈ ಚಿತ್ರಗಳು ಬಿಡುಗಡೆ ಆಗುವ ಮುನ್ನವೇ ಇಹಲೋಕಯಾತ್ರೆ ಮುಗಿಸಿ ದ್ದಾರೆ. ಗುರು ಕಶ್ಯಪ್ ಅವರು ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.

Facebook Comments