ಪ್ರಾಚೀನ ಕಾಲದಲ್ಲಿ ವಿದ್ಯಾಭ್ಯಾಸ ಕ್ರಮ ಹೇಗಿತ್ತು..?

ಈ ಸುದ್ದಿಯನ್ನು ಶೇರ್ ಮಾಡಿ

ಗುರುಕುಲ ಶಿಕ್ಷಣ ಯಾವ ಗುರಿಯನ್ನು ಸಾಸುತ್ತಿತ್ತು ಎಂಬುದು ಜಿಜ್ಞಾಸವಾದ ವಿಚಾರ. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಉನ್ನತ ಸ್ಥಾನವಿದೆ ಎನ್ನುವುದು ನಿರ್ವಿವಾದ ವಿಷಯ. ಸಾವಿರಾರು ವರ್ಷಗಳ ಅನುಭವದಿಂದ ಪ್ರಪಂಚದ ಹಿತಾಕಾಂಕ್ಷಿಗಳಾದ ಋಷಿಗಳು, ಆಚಾರ್ಯರು, ಅವತಾರಪುರಷರು, ಪ್ರವಾದಿಗಳು, ಶರಣರು, ಸಾಧುಸಂತರು, ಕಲೆಗಾರರು, ಕವಿಶ್ರೇಷ್ಠರು ಮೊದಲಾದವರೆಲ್ಲಾ ತಮ್ಮ ತಮ್ಮ ಜೀವನಾನುಭವಗಳನ್ನು ಮುಂದಿನವರ ಏಳಿಗೆ ನಿಮಿತ್ತ ಬೋಧನಾರೂಪವಾಗಿ, ಗ್ರಂಥಗಳ ರೂಪವಾಗಿ ಅನುಗ್ರಹಿಸಿರುತ್ತಾರೆ.

ಪ್ರಪಂಚದ ಎಲ್ಲ ಕಾಲದೇಶಗಳಲ್ಲೂ ಮಹಾತ್ಮರು ಉದಯಿಸಿರುವರೆಂದು ಚರಿತ್ರೆಯಲ್ಲಿ ಓದಬಹುದು. ಉಪನಿಷತ್ತು ಮಾತೃದೇವೋಭವ, ಪಿತೃದೇವೋಭವ ಎಂದು ಹೇಳಿ ಮುಂದೆ ಆಚಾರ್ಯ ದೇವೋ ಭವ ಎಂದು ಆದೇಶವನ್ನಿತ್ತಿದೆ. ತಾಯಿ, ತಂದೆ ಇವರನ್ನು ದೇವರೆಂದು ಭಾವಿಸುವಂತೆ ಗುರುವನ್ನೂ ದೇವರೆಂದು ಭಾವಿಸಬೇಕು ಎನ್ನುವುದು ಉಪನಿಷದ್ವಾಣಿಯ ತಾತ್ಪರ್ಯ.

ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರ, ಗುರುವೇ ಸಾಕ್ಷಾತ್ ಪರಬ್ರಹ್ಮ ಎನ್ನುವುದು ನಮ್ಮ ಸಂಸ್ಕøತಿಯು ಬೋಸಿರುವ ತತ್ವ. ನಮ್ಮ ದೇಶದಲ್ಲಿ ಸಮಾಜ ಜೀವನವು ಪರಿಶುದ್ಧವಾಗಿರಬೇಕಾದರೆ ಸತ್ಯದ ಜೊತೆಯಲ್ಲಿ ಅಹಿಂಸೆ, ಕಾರ್ಯಶ್ರದ್ಧೆ, ಸ್ನೇಹಪರತೆ, ಅನುಕಂಪ, ಪರಮಸಹಿಷ್ಣುತೆ, ಸಹೃದಯಭಾವ, ಪರೋಪಕಾರ ಮೊದಲಾದ ಸದ್ಗುಣಗಳನ್ನು ಜನಜೀವನದಲ್ಲಿ ಅಳವಡಿಸುವುದು ಅತ್ಯಗತ್ಯ.

ಇಂತಹ ಉದಾತ್ತ ಗುಣಗಳನ್ನು ಶಿಷ್ಯನಿಗೆ ಬೋಸುವುದೇ ಗುರುವಿನ ಕರ್ತವ್ಯವಾಗಬೇಕು. ಹಾಗಾದರೆ ಶಿಷ್ಯನ ಕರ್ತವ್ಯವೇನು? ಗುರು ಹೇಳಿದ್ದನ್ನು ಸಂಪೂರ್ಣವಾಗಿ ಅನುಸರಿಸಬೇಕೆ? ಗುರುವಿನಲ್ಲಿ ಅವನದು ಅಂಧಶ್ರದ್ದೆಯಾಗಬೇಕೆ? ಗುರು ತಪ್ಪು ಮಾಡಿದ್ದಲ್ಲಿ ಅದನ್ನು ತೋರಿಸುವುದು ತಪ್ಪಾದೀತೆ? ಗುರು ಮಾಡುವುದೆಲ್ಲವನ್ನೂ ಶಿಷ್ಯನು ತನಗೆ ಆದರ್ಶ ಎಂದು ತಿಳಿದುಕೊಳ್ಳಬೇಕೆ? ಎಂದು ಪ್ರಶ್ನಿಸಿಕೊಂಡಾಗ ಖಂಡಿತಾ ಇಲ್ಲ.

ಉಪನಿಷತ್ತಿನಲ್ಲಿ ಗುರುವು ಶಿಷ್ಯನು ತನಗೆ ಆದರ್ಶ ಎಂದು ತಿಳಿದುಕೊಳ್ಳಬೇಕೆ? ಎಂದು ಪ್ರಶ್ನಿಸಿಕೊಂಡಾಗ ಖಂಡಿತಾ ಇಲ್ಲ. ಉಪನಿಷತ್ತಿನಲ್ಲಿ ಗುರುವು ಶಿಷ್ಯನಿಗೆ,
ಯಾನ್ಯಾಸ್ಮಾಕಂ ಅನವದ್ಯಾನಿ ಕರ್ಮಾಣಿ
ತಾನಿ ತ್ವಯೋಪಾಸ್ಯಾನಿ, ನೋ ಇತರಾಣಿ
ನಮ್ಮ ಕರ್ಮಗಳಲ್ಲಿ ಯಾವುವು ನಿರ್ದೋಷವಾಗಿವೆಯೋ ಅವನ್ನು ನೀನು ಮಾಡಬೇಕು. ದೋಷಯುಕ್ತ ವಾದುವುಗಳನ್ನಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತಾನೆ. ಗುರುವು ಮಾಡಿದುದೆಲ್ಲವನ್ನು ಕಣ್ಣುಮುಚ್ಚಿ ಅನುಸರಿಸಬೇಕಾಗಿಲ್ಲ ಎಂದು ಇದರಿಂದ ತಿಳಿದುಬರುತ್ತದೆ. ಉಪನಿಷತ್ತುಗಳಲ್ಲಿಯೇ ಇನ್ನೊಂದು ಸ್ಥಳದಲ್ಲಿ ವಿದ್ಯಾರ್ಥಿಗಳು ಬಂದಾಗ ಗುರುವು ಅವರಿಗೆ ಪ್ರಶ್ನೆ ಕೇಳುವ ಸ್ವಾತಂತ್ರ್ಯ ನೀಡುತ್ತಾನೆ.

ಕಾಮಂ ಪ್ರಶ್ನಾನ್ ಪೃಚ್ಛತ, ಯದಿ ವಿಜ್ಞಾಸ್ಯಾಮಃ
ಸರ್ವಂ ವೋ ವಕ್ಷ್ಯಾಮಃ
ಎಂಬ ಮಾತು ಇಲ್ಲಿ ಗಮನಾರ್ಹ. ಬೇಕಾದಷ್ಟು ಪ್ರಶ್ನೆಗಳ್ನು ಕೇಳಿರಿ, ನಮಗೆ ಉತ್ತರ ತಿಳಿದಿದ್ದರೆ ನಿಮಗೆ ಪೂರ್ಣವಾಗಿ ಸಮಾಧಾನವನ್ನು ಹೇಳುತ್ತೇವೆ ಎಂದು ಗುರು ಹೇಳುವುದರಿಂದ ವಿದ್ಯಾರ್ಥಿಗಳಿಗೆ ಕುತೂಹಲಾನುಸಾರವಾಗಿ ಪ್ರಶ್ನೆಗಳನ್ನು ಕೇಳುವುದಕ್ಕೆ ಇದ್ದ ಅವಕಾಶ ಸ್ಪಷ್ಟವಾಗಿ ಗೋಚರವಾಗುತ್ತದೆ. ಅಲ್ಲದೆ ಗುರುವೂ ತಾನು ಸರ್ವಜ್ಞನೆಂಬ ಭಾವನೆಯನ್ನು ಇಟ್ಟುಕೊಂಡಿರಲಿಲ್ಲ ಎಂದೂ ನಮಗೆ ವೇದ್ಯವಾಗುತ್ತದೆ.

ಅಂದಮೇಲೆ ಇನ್ನೊಬ್ಬರಿಗೆ ತೊಂದರೆಯಾಗದಂತೆ ವರ್ತಿಸುವುದೇ ಸದ್ವಿದ್ಯೆ ಯಾರಿಗೆ ಏನಾದರೇನು ಎಂಬ ಉದಾಸೀನತೆ ಬಂದರೆ ಬರಿ ವಿದ್ಯೆ. ಮೂರು ಲೋಕಕ್ಕೆ ತೊಂದರೆಯಾದರೂ ಸರಿ, ನಾನು ಚೆನ್ನಿದ್ದರೆ ಸಾಕೆನ್ನುವುದು ದುರ್ವಿದ್ಯೆ. ಪ್ರಯುಕ್ತ ವಿದ್ಯೆ ಎಂಬುದು ಕೇವಲ ಮನಸ್ಸಿನ ಸರಕಾಗದೆ, ಕೇವಲ ಬುದ್ದಿಯ ಸರಕಾಗದೆ, ಅಂತಃಕರಣಕ್ಕೆ ಸಂಬಂಧಪಟ್ಟ ಸರಕಾದಲ್ಲಿ ಮಾತ್ರ ಅದು ಸದ್ಬುದ್ದಿಯ ಸದ್ವಿದ್ಯೆಯಾಗುತ್ತದೆ.

ಭಗವದ್ಗೀತೆಯನ್ನು ಉಪದೇಶಿಸಿದ ಭಗವಾನ್ ಶ್ರೀಕೃಷ್ಣ ತನ್ನ ಶಿಷ್ಯ ಅರ್ಜುನನಿಗೆ ಹೇಳುವ ಒಂದು ಮಾತು ಇಲ್ಲಿ ಗಮನಾರ್ಹವಾಗಿದೆ. 18ನೇ ಅಧ್ಯಾಯದ 63ನೇ ಶ್ಲೋಕದಲ್ಲಿ
ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾತ್‍ಗುಹ್ಯತರಂ ಮಯಾ
ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು
ನಾನು ನಿನಗೆ ಗೂಢವಾದ ಜ್ಞಾನವನ್ನು ಉಪದೇಶಿಸಿದ್ದೇನೆ. ಇದನ್ನು ಸಂಪೂರ್ಣವಾಗಿ ವಿಮರ್ಶಿಸಿ ನಿನಗೆ ಇಷ್ಟಬಂದಂತೆ ಮಾಡು ಎಂದು ಇದರ ಅರ್ಥ. ಇಲ್ಲಿ ಅರ್ಜುನನಿಗೆ ಕೃಷ್ಣ ವಿಮರ್ಶೇಯ ಹಾಗೂ ತನ್ನದೇ ಆದ ನಿರ್ಣಯವನ್ನು ಮಾಡುವ ಸ್ವಾತಂತ್ರ್ಯವನ್ನು ಕೊಟ್ಟಿರುವುದು ಮುಖ್ಯವಾದ ಅಂಶವಾಗಿದೆ. ಭಗವಾನ್ ಬುದ್ಧನು ತನ್ನ ಶಿಷ್ಯರಿಗೆ ಉಪದೇಶವನ್ನು ನೀಡುವಾಗಲೂ ತಾನು ಹೇಳುವುದೇ ಅಂತಿಮ ತತ್ತ್ವ ಇದನ್ನು ಎಲ್ಲರಿಗೂ ಒಪ್ಪಬೇಕು ಎಂದು ಹೇಳುವುದಿಲ್ಲ.

ಪರೀಕ್ಷ್ಯ ಭಿಕ್ಷವೋ ಗ್ರಾಹ್ಯಂನ ಪುನರ್ವಕ್ತೃಗೌರವಾತ್
ಎಲೈ ಭಿಕ್ಷುಗಳೇ ನಾನು ಹೇಳುವುದನ್ನು ಪರೀಕ್ಷಿಸಿ ಸರಿಯಾಗಿದ್ದರೆ ಒಪ್ಪಿಕೊಳ್ಳಿ ಹೇಳುತ್ತಿರುವ ನನ್ನಲ್ಲಿ ಗೌರವ ಬುದ್ಧಿಯನ್ನಿಟ್ಟು ಯಾವುದನ್ನೂ ಒಪ್ಪಿಕೊಳ್ಳಬೇಕಾಗಿಲ್ಲ. ತತ್ತ್ವ ಗೌರವ ಮುಖ್ಯವೇ ಹೊರತು, ವಕ್ತೃಗೌರವವಲ್ಲ ಎಂದು ಭಗವಾನ್ ಬುದ್ಧನು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

ಬುದ್ಧಿ ಬೇರೆ, ವಿದ್ಯೆ ಬೇರೆ, ವಿದ್ಯೆ ಬುದ್ಧಿಗಳ ಸಂಗಮದಿಂದ ಉತ್ಪನ್ನವಾಗುವ ಜ್ಞಾನವೇ ಬೇರೆ. ಈ ಎರಡೂ ಅನುಭವಗಳ ಕೂಟದಿಂದ ಉಂಟಾಗುವ ಜ್ಞಾನವೇ ವಿದ್ಯಾಭ್ಯಾಸದ ಫಲಕ್ಕೆ ಮೂಲಕಾರಣ ಎಂಬುದು ಹಿರಿಯರಿಗೆ ಮನದಟ್ಟಾದಾಗ ಮಾತ್ರ ವಿದ್ಯಾರ್ಥಿಗಳ ಶ್ರೇಯಸ್ಸಿಗೆ ದಾರಿ ದೊರಕೀತು. ದೇಹಕ್ಕೆ ವಜ್ರದ ಸ್ಥಿರತೆ ಬಂದರೆ ಸಾಲದು, ಅದು ಮನಸ್ಸಿಗೂ ಬರುವಂತಾಗಬೇಕು. ಆಗಲೇ ವಿದ್ಯಾರ್ಥಿ ಜೀವನ ಹಸನಾಗುತ್ತದೆಂಬುದು ಅರ್ಥವಾಗುವಂತೆ ಮನದಟ್ಟಾಗುತ್ತದೆ.

ಅಧ್ಯಾಪಕರಾದವರಲ್ಲಿ ಇರಬೇಕಾದ ಬಹುಮುಖ್ಯವಾದ ಗುಣಗಳೆಂದರೆ: ನಾನು ಪಾಠವನ್ನು ಸರಿಯಾಗಿ ಹೇಳಿಕೊಡುತ್ತಿದ್ದೇನೆಯೇ? ಹೇಳಿಕೊಡುತ್ತಿರುವ ಪಾಠದಲ್ಲಿ ಸತ್ಯಸತ್ವಗಳು ಅಡಕಗೊಂಡಿವೆಯೇ? ಹೇಳುತ್ತಿರುವ ಪಾಠದ ಬಗೆಗೆ ವಿದ್ಯಾರ್ಥಿಯಾದವನ್ನು ಎಷ್ಟರ ಮಟ್ಟಿಗಿನ ಕುತೂಹಲಾಸಕ್ತಿ ಹಾಗೂ ಆತನ ಗ್ರಹಿಕೆಯ ಪರಿಣಾಮವೆಷ್ಟಾಗಿರಬಹುದು? ಹೀಗೆ ಪ್ರಶ್ನಿಸಿಕೊಳ್ಳುತ್ತಾ ಅಧ್ಯಾಪನ ಮಾಡುವವ ನಿಜವಾದ ಅಧ್ಯಾಪಕ.

ಆದುದರಿಂದ ಪ್ರಾಚೀನ ಭಾರತದಲ್ಲಿ ಗುರುವಿನಲ್ಲಿ ಭಕ್ತಿ, ಆತನ ವಾಕ್ಯದಲ್ಲಿ ಶ್ರದ್ದೆ ಇಡಬೇಕು ಎಂದು ನಿರೀಕ್ಷಿಸಿದ್ದರೂ ಅದು ಮೂಢಭಕ್ತಿ ಮತ್ತು ಅಂಧಶ್ರದ್ದೆಯಾಗಿರಬೇಕೆಂಬ ನಿರೀಕ್ಷೆ ಇರಲಿಲ್ಲವೆಂದು ತಿಳಿದುಬರುತ್ತದೆ. ವಿದ್ಯಾಭ್ಯಾಸದಲ್ಲಿ ಈಗಲೂ ನಾವು ಈ ತತ್ತ್ವವನ್ನು ಅನುಸರಿಸಬೇಕು. ವಿದ್ಯಾರ್ಥಿಗೆ ಪ್ರಶ್ನೆ ಕೇಳಲು ಸ್ವಾತಂತ್ರ್ಯವಿರಬೇಕು.

ಗುರುವಿಗೆ ತಾನೇ ಸರ್ವಜ್ಞನೆಂಬ ಭ್ರಾಂತಿ ಇರಬಾರದು. ವಿಷಯ ನಿರ್ಣಯ ದೊಡ್ಡದೇ ಹೊರತು ಗುರುವಿನ ಹೆಮ್ಮೆಯಲ್ಲ ಎಂಬುದನ್ನು ಎಲ್ಲ ಅಧ್ಯಾಪಕರು ನೆನಪಿನಲ್ಲಿಡಬೇಕು, ಸತ್ಯದ ಅನ್ವೇಷಣೆ ಅನಂತಯಾತ್ರೆ, ಅದಕ್ಕೆ ಕೊನೆ ಇಲ್ಲ.

ಕೆಲವು ಮೆಟ್ಟಿಲುಗಳನ್ನು ಏರಿದ ಮಾತ್ರಕ್ಕೆ ತಾವೇ ಶಿಖರವನ್ನು ಏರಿದ್ದೇವೆ, ಇನ್ನು ಮುಂದೆ ಹೋಗಲು ಯಾರಿಗೂ ಸಾಧ್ಯವಿಲ್ಲ ಎಂಬ ಭಾವನೆ ತೊಲಗಬೇಕು ಕವಿಯ ಒಂದು ಮಾತು-
ಎಡವದೆಯೇ ಮೈಗಾಯವಡೆಯದೆಯೇ, ಮಗುವಾರು ನಡೆಯ ಕಲಿತವನು? ಮತಿನೀತಿ ಗತಿಯಂತು
ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು
ಮೈದಡವಿಕೊಳ್ಳುವರೆಲ್ಲ ಮಂಕುತಿಮ್ಮ

Facebook Comments

Sri Raghav

Admin