ಸರ್ಕಾರಿ ನೌಕರರ ಕರಡುನೀತಿ ಬದಲಾವಣೆಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.30- ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ(ಡಿಪಿಎಆರ್) ಸರ್ಕಾರಿ ನೌಕರರಿಗೆ ಹೊಸದಾಗಿ ಜಾರಿ ಮಾಡಿರುವ ಕೆಲವು ವಿವಾದಾತ್ಮಕ ಕರಡು ನೀತಿಯನ್ನು ಬದಲಾವಣೆ ಮಾಡದಿದ್ದರೆ ಬೀದಿಗಿಳಿಯಬೇಕಾಗುತ್ತದೆ ಎಂದು ಸಚಿವಾಲಯದ ಸರ್ಕಾರಿ ನೌಕರರ ಸಂಘ ಎಚ್ಚರಿಸಿದೆ.

ಐಎಎಸ್ ಅಕಾರಿಗಳ ಚಿತಾವಣೆಯಿಂದಾಗಿ ಸರ್ಕಾರಿ ನೌಕರರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಹುನ್ನಾರ ಇದಾಗಿದೆ. ಕೂಡಲೇ ಸರ್ಕಾರ ಕರಡು ನೀತಿಯನ್ನು ಹಿಂಪಡೆದು ಕೆಲವು ಮಾರ್ಪಾಡುಗಳನ್ನು ಮಾಡಲೇಬೇಕೆಂದು ಸಂಘದ ಅಧ್ಯಕ್ಷ ಟಿ.ಗುರುಸ್ವಾಮಿ ಒತ್ತಾಯಿಸಿದ್ದಾರೆ.

ಸೋಮವಾರ ಸಂಘದ ಪದಾಕಾರಿಗಳು ಸಭೆ ಸೇರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ. ನಮ್ಮ ಮನವಿಯನ್ನು ಪುರಸ್ಕರಿಸದಿದ್ದರೆ ಹೋರಾಟ ಅನಿವಾರ್ಯ ಎಂದರು.

ಸರ್ಕಾರಿ ನೌಕರರು ಪತ್ರಿಕೆಗಳಿಗೆ ಅಂಕಣ ಬರೆಯಬಾರದು, ನಾಟಕಗಳಲ್ಲಿ ಅಭಿನಯಿಸಬಾರದು, ಸರ್ಕಾರದ ಯಾವುದೇ ತೀರ್ಮಾನಗಳನ್ನು ಪ್ರಶ್ನಿಸಬಾರದು, ಟೀಕೆಯನ್ನೂ ಮಾಡಬಾರದು ಎಂದು ಹೇಳಿರುವುದು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ ಎಂದು ಕಿಡಿಕಾರಿದರು.

ಈಗಾಗಲೇ ಪದಾಕಾರಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಮುಂದಿನ ವಾರ ಪುನಃ ಸಭೆ ಸೇರಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ನಮ್ಮ ಕುಟುಂಬದವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಇದರಿಂದ ಕಡಿವಾಣ ಬಿದ್ದಂತಾಗುತ್ತದೆ. ಬಿಡುವಿನ ಸಮಯದಲ್ಲಿ ಕೆಲವರು ಪುಸ್ತಕ ಬರೆಯುವ ಇಲ್ಲವೇ ನಾಟಕಗಳಲ್ಲಿ ಅಭಿನಯಿಸುವ ಅಭಿರುಚಿ ಇಟ್ಟುಕೊಂಡಿದ್ದಾರೆ.

ಸರ್ಕಾರಿ ನೌಕರರು ಎಂದ ಕ್ಷಣ ನಮ್ಮ ಕುಟುಂಬದವರು ಹಾಗೂ ಸಂಬಂಕರಿಗೂ ನಿರ್ಬಂಧ ಹಾಕುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಹೊಸದಾಗಿ ಜಾರಿಗೆ ಬಂದಿರುವ ಕರುಡುನೀತಿ ಹಿಂದೆ ಐಎಎಸ್ ಅಕಾರಿಗಳ ಕುತಂತ್ರ ಅಡಗಿದೆ. ಅವರು ನಮ್ಮನ್ನು ಗುಲಾಮರಂತೆ, 2ನೇ ದರ್ಜೆಯವರಂತೆ ನಡೆಸಿಕೊಳ್ಳಲು ಇಂತಹ ನಿಯಮಗಳನ್ನು ಜಾರಿ ಮಾಡಿದ್ದಾರೆ. ತಕ್ಷಣವೇ ಹಿಂಪಡೆಯಬೇಕೆಂದು ಮನವಿ ಮಾಡಿದರು.

ಈ ಹಿಂದೆ ಯಾವ ಸರ್ಕಾರವೂ ಕೂಡ ಇಂತಹ ನಿಯಮಗಳನ್ನು ಜಾರಿ ಮಾಡಿರಲಿಲ್ಲ. ಚಲನಚಿತ್ರದಲ್ಲಿ ನಟಿಸಬಾರದು, ವಿದೇಶಕ್ಕೆ ಹೋಗಲು ಅನುಮತಿ ಪಡೆಯುವುದು ನಮ್ಮ ಅಭ್ಯಂತರವೇನಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿಗೆ ಕೆಲವರು ದಿಕ್ಕು ತಪ್ಪಿಸಿ ಕರಡು ನೀತಿಯನ್ನು ಸಿದ್ದಪಡಿಸಿದ್ದಾರೆ. ಮತ್ತೊಮ್ಮೆ ಸರ್ಕಾರಕ್ಕೆ ಇದರಿಂದಾಗುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಲಿದ್ದೇವೆ ಎಂದು ಹೇಳಿದರು.

Facebook Comments

Sri Raghav

Admin