ಇಂದಿನಿಂದ ಜಿಮ್‍ಗಳಲ್ಲಿ ಕಸರತ್ತು ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.5- ಲಾಕ್‍ಡೌನ್ ನಿಯಮಾವಳಿಗಳು ಸಡಿಲಗೊಂಡ ಹಿನ್ನೆಲೆಯಲ್ಲಿ ಇಂದಿನಿಂದ ಜಿಮ್ ಮತ್ತು ಯೋಗ ಕೇಂದ್ರಗಳು ಪ್ರಾರಂಭವಾಗಿವೆ.

ಕೇಂದ್ರ ಆರೋಗ್ಯ ಇಲಾಖೆ ಹಲವು ಮಾರ್ಗಸೂಚಿಗಳನ್ನು ವಿಧಿಸಿ ಜಿಮ್ ಮತ್ತು ಯೋಗಕೇಂದ್ರಗಳ ಪ್ರಾರಂಭಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಉದ್ಯಾನನಗರಿ ಬೆಂಗಳೂರಿನಲ್ಲಿ ಜಿಮ್‍ನಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್, ಫೇಸ್‍ಶೀಲ್ಡ್‍ಗಳನ್ನು ಧರಿಸಿಕೊಂಡು ಕಸರತ್ತು ನಡೆಸಿದರು.

ಅದೇ ರೀತಿ ಯೋಗಕೇಂದ್ರಗಳಲ್ಲೂ ಕೂಡ ಅಂತರ ಕಾಯ್ದುಕೊಂಡು ಯೋಗ ಮತ್ತು ಧ್ಯಾನಗಳಲ್ಲಿ ನಿರತರಾಗಿದ್ದರು. ಮೊದಲ ದಿನವಾದ ಇಂದು ಯೋಗ ಮತ್ತು ಜಿಮ್ ಕೇಂದ್ರಗಳಿಗೆ ಬರುವವರ ಸಂಖ್ಯೆ ವಿರಳವಾಗಿತ್ತು.

ಇಂದಿನಿಂದ ಜಿಮ್ ಮತ್ತು ಯೋಗ ಕೇಂದ್ರ ಪ್ರಾರಂಭವಾಗಲಿವೆ ಎಂಬ ಹಿನ್ನೆಲೆಯಲ್ಲಿ ಯೋಗ ಕೇಂದ್ರಗಳ ಮಾಲೀಕರು ಮತ್ತು ತರಬೇತಿಗಾರರು ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಗ್ರಾಹಕರನ್ನು ಆಹ್ವಾನಿಸಲು ಸಜ್ಜು ಮಾಡಿಕೊಂಡಿದ್ದವು.

ಸ್ಯಾನಿಟೈಜ್ ಮಾಡಿ ಎಲ್ಲ ಜಿಮ್ ಹಾಗೂ ಯೋಗಕೇಂದ್ರಗಳನ್ನು ಸ್ವಚ್ಛತೆ ಮಾಡಲಾಗಿತ್ತು. ಕಂಟೈನ್ಮೆಂಟ್ ವಲಯಗಳಲ್ಲಿರುವ ಜಿಮ್ ಕೇಂದ್ರಗಳಿಗೆ ನಿರ್ಬಂದ ವಿಧಿಸಲಾಗಿತ್ತು. ವಿವಿಧ ಕಡೆ ಜಿಮ್‍ಗಳನ್ನು ತೆರೆಯಲಾಗಿತ್ತಾದರೂ ನಿರೀಕ್ಷಿತ ಪ್ರಮಾಣದಲ್ಲಿ ಜನ ಆಗಮಿಸಿರಲಿಲ್ಲ.

ಇಂದೇ ಪ್ರಾರಂಭವಾಗಿರುವುದರಿಂದ ಹಂತ ಹಂತಹವಾಗಿ ಜಿಮ್‍ಗಳಿಗೆ ಆಸಕ್ತರು ಬರುತ್ತಾರೆ ಎಂದು ಜಿಮ್ ಮಾಲೀಕರು ತಿಳಿಸಿದರು. ಕಳೆದ ನಾಲ್ಕು ತಿಂಗಳಿನಿಂದ ಜಿಮ್ ಮತ್ತು ಯೋಗ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು.

ಕೊರೊನಾ ಅನ್‍ಲಾಕ್ 3 ಅನ್ವಯ ಇಂದಿನಿಂದ ಪ್ರಾರಂಭ ಮಾಡಲಾಗಿದ್ದು, ಕೆಲವು ಜಿಮ್‍ಗಳಿಗೆ ಬೆಳ್ಳಂಬೆಳಗ್ಗೆ ಜನ ನಿರೀಕ್ಷೆಗೂ ಮೀರಿ ಆಗಮಿಸಿದರೆ ಕೆಲವೆಡೆ ವಿರಳವಾಗಿತ್ತು.

Facebook Comments

Sri Raghav

Admin