ಅವಧಿಗೂ ಮುನ್ನವೇ ಲೋಕಸಭೆ ಚುನಾವಣೆ ಸಾಧ್ಯತೆ, ಸುಳಿವು ನೀಡಿದ ದೇವೇಗೌಡರು
ನವದೆಹಲಿ,ಜೂ.28- ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಲೋಕಸಭೆ ಚುನಾವಣೆ ಅವಧಿಗೂ ಮುನ್ನವೇ ನಡೆಯುವ ಸಾಧ್ಯತೆ ಇದೆ ಎಂಬ ಸುಳಿವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿದ್ದಾರೆ. ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ ನಡೆಸುತ್ತಿದೆ. ಡಿಸೆಂಬರ್ ತಿಂಗಳಿನಲ್ಲಿ ಛತ್ತೀಸ್ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಲೋಕಸಭೆಗೂ ಚುನಾವಣೆ ನಡೆದರೂ ಅಚ್ಚರಿ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸಬೇಕೆಂದು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ನಲ್ಲೆ ಲೋಕಸಭೆಗೆ ಚುನಾವಣೆ ನಡೆಸಿ ಹೊಸ ಜನಾದೇಶ ಪಡೆಯುವ ಸಂಭವವಿದೆ ಎಂದರು.
ಜುಲೈ ತಿಂಗಳಿನಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನ ಆಗಸ್ಟ್ನಲ್ಲಿ ಮುಗಿಯಲಿದೆ. ನಂತರ ಅಕ್ಟೋಬರ್ ತಿಂಗಳಿನಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಪ್ರಾಯುಶಃ ಅದು ಎನ್ಡಿಎ ಸರ್ಕಾರದ ಕೊನೆಯ ಅಧಿವೇಶನವಾದರೂ ಆಗಬಹುದು. ಈಗಾಗಲೇ ಬಿಜೆಪಿ ಲೋಕಸಭೆ ಚುನಾವಣೆಗೆ ಸಿದ್ದತೆಯನ್ನು ಕೈಗೊಂಡಿದೆ. ಉಳಿದ ರಾಜಕೀಯ ಪಕ್ಷಗಳು ಕೂಡ ಚುನಾವಣೆಯನ್ನು ಎದುರಿಸುವುದು ಅನಿವಾರ್ಯ ಎಂದರು.
ಪರ್ಯಾಯವಲ್ಲ:
ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಲಿವೆ ಎಂಬ ಮಾತು ಕೇಳಿಬರುತ್ತಿದೆ. ಒಂದು ಕಡೆ ಯುಪಿಎ ಮತ್ತೊಂದು ಕಡೆ ತೃತೀಯ ರಂಗ, ಮತ್ತೊಂದು ಕಡೆ ಮಹಾ ಘಟಬಂಧನ್ ರಚನೆ ಮಾಡಿಕೊಳ್ಳಲು ವೇದಿಕೆ ಸಿದ್ದವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಅನಿವಾರ್ಯವಾಗಿ ಮೈತ್ರಿ ಮಾಡಿಕೊಂಡಿವೆ. ಹಾಗೆಂದ ಮಾತ್ರಕ್ಕೆ ದೇಶದಲ್ಲಿ ಮೈತ್ರಿಯಾಗಲಿದೆ ಎಂಬುದನ್ನು ನಾನು ಹೇಳಲು ಸಾಧ್ಯವಿಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ಪರಿಸ್ಥಿತಿ ಇದೆ. ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ಪ್ರತ್ಯೇಕವಾಗಿ ಚುನಾವಣೆ ಎದುರಿಸಲಿದ್ದೇನೆ ಎಂದು ಹೇಳಿದ್ದಾರೆ, ಇದೇ ರೀತಿ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ದು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸೇರಿದಂತೆ ಮತ್ತಿತರರು ಪ್ರತ್ಯೇಕವಾಗಿ ಚುನಾವಣೆಗೆ ಹೋಗಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಾಯವತಿ, ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ಒಂದಾಗಿ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಏನು ಮಾಡುತ್ತಾರೆ ಗೊತ್ತಿಲ್ಲ. ಕೇರಳದಲ್ಲಿ ಎನ್ಡಿಎಫ್, ಯುಡಿಎಫ್ ಒಂದಾಗಿ ಚುನಾವಣೆ ಎದುರಿಸುವುದು ಸಾದ್ಯವೇ ಇಲ್ಲ. ಬಿಹಾರದಲ್ಲಿ ನಿತೀಶ್ ಕುಮಾರ್ ಬಿಜೆಪಿಯಿಂದ ಹೊರಬಂದು ಪ್ರತ್ಯೇಕವಾಗಿ ಚುನಾವಣೆ ಎದುರಿಸಬಹುದು. ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ತಕ್ಷಣ ಎಲ್ಲ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆಯಾ ಪರಿಸ್ಥಿತಿಗೆ ಅನುಗುಣವಾಗಿ ಸಮಯವೇ ಎಲ್ಲವನ್ನೂ ತೀರ್ಮಾನಿಸುತ್ತದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಎರಡು ಪಕ್ಷಗಳು ಒಂದಾಗಿ ಲೋಕಸಭೆ ಚುನಾವಣೆ ಎದುರಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಬಿಎಸ್ಪಿ ಜೊತೆ ನಾವು ಈಗಾಗಲೇ ಮೈತ್ರಿ ಮಾಡಿಕೊಂಡಿರುವುದರಿಂದ ಒಂದು ಲೋಕಸಭಾ ಕ್ಷೇತ್ರವನ್ನು ಅವರಿಗೆ ಬಿಟ್ಟು ಕೊಡಲಿದ್ದೇವೆ ಎಂದು ದೇವೇಗೌಡರು ಹೇಳಿದರು.