ರಾಜ್ಯದಲ್ಲಿ ಜೆಡಿಎಸ್ ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಂಡಿದೆ : ಎಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಸೆ.17-ಜೆಡಿಎಸ್‍ನಲ್ಲಿ ಯಾವುದೇ ರೀತಿಯ ತಳಮಳ ಇಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇದನ್ನು ಸಹಿಸದ ರಾಷ್ಟ್ರೀಯ ಪಕ್ಷಗಳು ಹುನ್ನಾರ ನಡೆಸುತ್ತಿದ್ದು, ಯಶಸ್ವಿಯಾಗುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಜೆಡಿಎಸ್ ಬಗ್ಗೆ ಹಲವು ವರ್ಷಗಳಿಂದಲೂ ಅಪಪ್ರಚಾರ ಮಾಡಲಾಗುತ್ತಿದೆ ಇದೇನು ಹೊಸದಲ್ಲ ಎಂದ ಅವರು, ಕುಮಾರಸ್ವಾಮಿಯವರನ್ನು ಮತ್ತೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಲು ಪಕ್ಷ ಪಣತೊಟ್ಟಿದೆ ಎಂದರು. ರಾಜ್ಯದಲ್ಲಿ ಜೆಡಿಎಸ್‍ನ್ನು ಅಳಿಸಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನು ಜನ ಕೈಬಿಡುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಉಪಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರ ರಾಷ್ಟ್ರಮಟ್ಟದಲ್ಲಿ ತೀರ್ಮಾನವಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೆ ರೈತರ 48 ಸಾವಿರ ಕೋಟಿ ರೂ. ಸಾಲ ಮನ್ನಾ ಆಗುತ್ತಿರಲಿಲ್ಲ ಎಂದ ಅವರು, ಗೃಹಲಕ್ಷ್ಮಿ ಯೋಜನೆ, ಒಂದು ಸಾವಿರ ಇಂಗ್ಲೀಷ್ ಶಾಲೆ ಪ್ರಾರಂಭವಾಗುತ್ತಿರಲಿಲ್ಲ ಎಂದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇವೆ. ಇದನ್ನು ತಮಟೆ ಬಾರಿಸಿ ಹೇಳಬೇಕೇ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ಡಿ.ಕೆ.ಶಿವಕುಮಾರ್ ಪರವಾಗಿ ಪ್ರತಿಭಟನೆಗೆ ಹೋಗಲಿಲ್ಲ ಎಂಬ ಆಕ್ಷೇಪಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಡಿಕೆಶಿ ತಾಯಿಯವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಟೀಕಾಕಾರರಿಂದ ಪಾಠ ಕಲಿಯಬೇಕಾಗಿಲ್ಲ ಎಂದು ಹೇಳಿದ ಅವರು, ಹಗಲು ಒಂದು ಕಡೆ, ರಾತ್ರಿ ಇನ್ನೊಂದು ಕಡೆ ಇರುವವರು ಡಿ.ಕೆ.ಶಿವಕುಮಾರ್ ಪರ ಮಾತನಾಡುತ್ತಿದ್ದಾರೆ.

ನಾವು ಡಿ.ಕೆ.ಶಿವಕುಮಾರ್ ಕುಟುಂಬದವರೊಂದಿಗೆ ನಿಕಟ ಸಂಪರ್ಕ ಹೊಂದಿರುವುದನ್ನು ಬಹಿರಂಗವಾಗಿ ಹೇಳಬೇಕಾಗಿಲ್ಲ ಎಂದರು. ಡಿ.ಕೆ.ಶಿವಕುಮಾರ್ ಎಲ್ಲ ಸಂಕಷ್ಟಗಳನ್ನು ಎದುರಿಸುವ ಸಾಮಥ್ರ್ಯ ಹೊಂದಿದ್ದಾರೆ ಎಂದು ಹೇಳಿದರು.

Facebook Comments