ಹೊರಟ್ಟಿ, ಕೋನರೆಡ್ಡಿ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ : ಎಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

revanna

ಹುಬ್ಬಳ್ಳಿ, ಜೂ.17-ಬಸವರಾಜ್ ಹೊರಟ್ಟಿ , ಎನ್.ಎಚ್.ಕೋನರೆಡ್ಡಿ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಮಸ್ಯೆಗಳ ಬಗ್ಗೆ ಎನ್.ಎಚ್.ಕೋನರೆಡ್ಡಿ ಅವರು ಅವಿರತ ಹೋರಾಟ ಮಾಡಿದ್ದಾರೆ. ಬೀದಿಗಿಳಿದು ಅವರು ಹೋರಾಟ ನಡೆಸಿ ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದ್ದಾರೆ.

ಅದೇ ರೀತಿ ಬಸವರಾಜ್ ಹೊರಟ್ಟಿ 30 ವರ್ಷಗಳ ಕಾಲ ಶಿಕ್ಷಣ ಇಲಾಖೆಯ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ಅವರು ಹೇಳಿದರು. ಪುಕ್ಕಟೆ ಪ್ರಚಾರ: ನಾನು ಸೂಪರ್ ಸಿಎಂ ಎಂದು ಪುಕ್ಕಟೆ ಪ್ರಚಾರ ಸಿಗುತ್ತಿದೆ. ನಾನು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಕೆಲಸವನ್ನು ಮಾತ್ರ ಮಾಡುತ್ತಿದ್ದೇನೆ. ನೀರಾವರಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಕಾಂಗ್ರೆಸ್ ಅಧ್ಯಕ್ಷರಿಗೆ ಈ ಸಂಬಂಧ ಬಹಿರಂಗವಾಗಿಯೇ ಹೇಳಿದ್ದೇನೆ. ನಾನು ಡಿ.ಕೆ.ಶಿವಕುಮಾರ್ ಅವರು ಚೆನ್ನಾಗಿಯೇ ಇದ್ದೇವೆ. ಸುಮ್ಮನೆ ನಮ್ಮ ನಡುವೆ ಜಗಳ ತಂದಿಡುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಉನ್ನತ ಶಿಕ್ಷಣಕ್ಕೆ ಬಸವರಾಜ್ ಹೊರಟ್ಟಿ ಅವರ ಕೊಡುಗೆ ಅಪಾರವಿದೆ. ಹೊರಟ್ಟಿ ಅವರು ನಮ್ಮ ನಾಯಕರು. ಯಾವ ಖಾತೆ ಕೊಟ್ಟರೂ ಅದನ್ನು ನಿರ್ವಹಿಸುವ ಸಾಮಥ್ರ್ಯ ಅವರಿಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ರಂಗಪ್ಪನವರನ್ನು ಸಲಹೆಗಾರರನ್ನಾಗಿ ನೇಮಕ ಮಾಡುವ ವಿಚಾರವಾಗಲಿ, ರೋಹಿಣಿ ಸಿಂಧೂರಿಯವರನ್ನು ಹಾಸನ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡುವ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದರು. ಪೂರ್ಣ ಬಜೆಟ್ ಅಥವಾ ಪೂರಕ ಬಜೆಟ್ ಬಗ್ಗೆ ನನ್ನ ಸಲಹೆ ಕೇಳಿದರೆ ಹೇಳುತ್ತೇನೆ. ಅದರ ನಿರ್ಧಾರವನ್ನು ಮುಖ್ಯಮಂತ್ರಿಗಳು ಮಾಡುತ್ತಾರೆ ಎಂದು ಜಾಣ್ಮೆಯ ಉತ್ತರ ನೀಡಿದರು.

Facebook Comments

Sri Raghav

Admin