ಅನರ್ಹಗೊಂಡ ಶಾಸಕ ಎಚ್.ವಿಶ್ವನಾಥ್ ಹೈಕೋರ್ಟ ಮೊರೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜು. 28- ವಿಧಾನಸಭಾಧ್ಯಕ್ಷರು ರಾಜೀನಾಮೆ ನೀಡಿದ್ದ ಶಾಸಕರನ್ನು ಬಹಳ ಅವಸರದಲ್ಲಿ ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆಂದು ಪ್ರತಿಕ್ರಿಯಿಸಿದ ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಈ ತೀರ್ಪಿನ ವಿರುದ್ಧ ರಾಜ್ಯ ಹೈಕೋರ್ಟಿನ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಇಂದು ವಿಧಾನಸಭಾಧ್ಯಕ್ಷರು ಶಾಸಕರನ್ನು ಅನರ್ಹಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಲ್ಲಿಸಿದ್ದ ಅನರ್ಹತೆ ಅರ್ಜಿಯನ್ನು ಆಧರಿಸಿ ಈ ತೀರ್ಪು ನೀಡಲಾಗಿದೆ. ಆದರೆ ನಾವು ಖುದ್ದು ಹಾಜರಾಗಿ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಿಚಾರ ಹೆಚ್ಚು ಪ್ರಸ್ತಾಪವಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ನಡೆಸುವವರ ನಡವಳಿಕೆಯಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಾಗಿದೆ. ದುಡ್ಡಿಗಾಗಲಿ, ಹುದ್ದೆಗಾಗಲಿ ಅಥವಾ ಇನ್ಯಾವುದೋ ಉದ್ದೇಶಕ್ಕಾಗಿ ರಾಜೀನಾಮೆ ನೀಡಿಲ್ಲ, ಒಂದು ಪದವಿಯನ್ನು ತ್ಯಾಗ ಮಾಡಿ. ಇನ್ನೊಂದು ಪದವಿಗಾಗಿ ಆಸೆ ಪಟ್ಟವರಲ್ಲ, ಎಲ್ಲ ಪ್ರಚಲಿತ ರಾಜಕಾರಣವನ್ನು ನೋಡಿ ಬೇಸರವಾಗಿದೆ. ನಮ್ಮ ಕ್ಷೇತ್ರದ ಮತದಾರರಲ್ಲಿ ಕ್ಷಮೆ ಕೋರುತ್ತೇನೆ. ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವ ಸಭಾಧ್ಯಕ್ಷರ ತೀರ್ಪಿಗೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಹೈಕೋರ್ಟ್‍ನಲ್ಲಿ ವಾದ ಮಂಡಿಸುತ್ತೇವೆ ಎಂದ ಅವರು ಅರ್ಜಿದಾರರ ನೋವನ್ನಷ್ಟೆ ಆಲಿಸಿದ್ದಾರೆ. ನಮ್ಮ ನೋವಿಗೆ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಭಾಧ್ಯಕ್ಷರು ಶಾಸಕರೇ ಆಗಿದ್ದು, ಸರ್ಕಾರ ನಡೆಸುವವರ ವರ್ತನೆ ಜನರ ಪರವಾಗಿತ್ತೇ ಎಂಬುದರ ಸುದೀರ್ಘ ಯೋಚನೆ ಮಾಡಬೇಕಿತ್ತು. ಸಭಾಧ್ಯಕ್ಷರ ಅರೆನ್ಯಾಯಿಕ ಪ್ರಾಧಿಕಾರ ಶಿಕ್ಷೆ ಕೊಡುವ ಕೋರ್ಟ್ ಅಲ್ಲ ಎಂದರು.

ಮೂವರು ಸಚಿವರು ಸೇರಿದಂತೆ ಹಲವು ಶಾಸಕರು ರಾಜೀನಾಮೆ ನೀಡಿರುವ ವಿಚಾರ ಗಂಭೀರವಾದದ್ದು, ಬರೀ ರಾಜಕಾರಣ ಹಾಗೂ ಅಧಿಕಾರಕ್ಕಷ್ಟೆ ಸೀಮಿತವಲ್ಲ, ರಾಜ್ಯದ ಅಭಿವೃದ್ಧಿ ವಿಚಾರದ ಪ್ರಶ್ನೆ ಎದುರಾದಾಗ ಸರ್ಕಾರದ ವರ್ತನೆ ವಿರುದ್ಧ ಬೇಸತ್ತು ರಾಜೀನಾಮೆ ನೀಡಿದೆವು. ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು, ಜಿಂದಾಲ್‍ಗೆ ಭೂಮಿ ನೀಡುವ ವಿಚಾರದಲ್ಲಿ ಸರ್ಕಾರದ ವಿರುದ್ಧವೇ ದನಿ ಎತ್ತಿದ್ದರು. ಅದು ಕೂಡ ಸರ್ಕಾರ ವಿರೋಧಿ ನೀತಿ ಅಲ್ಲವೆ ಎಂದು ವಿಶ್ವನಾಥ್ ಗುಡುಗಿದರು.

Facebook Comments