“ಕಾಳಿದಾಸನ ಪೋಷಾಕು ತೊಟ್ಟು ಸಂಭ್ರಮಾಚರಣೆ ಮಾಡಬೇಕು”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.9- ಶ್ರೀಕೃಷ್ಣ ಜನ್ಮಾಷ್ಠಮಿಯಂದು ಕೃಷ್ಣನ ವೇಷಭೂಷಣ ತೊಟ್ಟು ಸಂಭ್ರಮಿಸುವ ರೀತಿಯಲ್ಲಿ ಕವಿರತ್ನ ಕಾಳಿದಾಸನ ಉಡುಗೆ ತೊಡುಗೆ ತೊಟ್ಟು ಸಂಭ್ರಮಾಚರಣೆ ಮಾಡಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸಲಹೆ ಮಾಡಿದರು.  ಕಾಳಿದಾಸ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸಂಘ ಹೊರ ತಂದ ಕಾಳಿದಾಸನ ಮೇಘದೂತ ವಿಭಿನ್ನ ಕೋನಗಳ ಅವಲೋಕನ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಂಗ್ಲ ಕವಿ ಶೇಕ್ಸ್‍ಪಿಯರ್ ಅವರ ಹುಟ್ಟೂರಿನಲ್ಲಿ ಒಂದು ವಾರ ಶೇಕ್ಸ್‍ಪಿಯರ್ ಉಡುಗೆ-ತೊಡುಗೆ ತೊಟ್ಟು ಎಲ್ಲಿ ನೋಡಿದರೂ ಅವರ ಭಾವಚಿತ್ರ ಪ್ರದರ್ಶಿಸಿ ಸಂಭ್ರಮಿಸುತ್ತಾರೆ.

ಹಾಗೆಯೇ ನಾವು ಕೂಡ ಕವಿ ಕಾಳಿದಾಸನನ್ನು ಜೀವಂತವಾಗಿರಿಸುವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ರೂಪಿಸಬೇಕು.ಒಂದು ನಿರ್ದಿಷ್ಟ ದಿನ ಬೆಂಗಳೂರಿನಲ್ಲಿ ಕಾಳಿದಾಸನ ಉಡುಗೆ ತೊಡುಗೆ ತೊಟ್ಟು ಸಂಭ್ರಮಿಸುವ ಕಾರ್ಯಕ್ರಮ ಮಾಡಬೇಕೆಂದು ಹೇಳಿದರು. ಜಗತ್ತಿನ ಶ್ರೇಷ್ಠ ಕವಿ ಶೇಕ್ಸ್‍ಪಿಯರ್‍ಗೆ ಸರಿಸಮಾನದ ಕವಿ ಕಾಳಿದಾಸ ಎಂದು ಬಣ್ಣಿಸಿದರು.

ವರನಟ ಡಾ.ರಾಜ್‍ಕುಮಾರ್ ಅವರು ತಮ್ಮ ಅಮೋಘ ಅಭಿನಯದ ಮೂಲಕ ಕವಿರತ್ನ ಕಾಳಿದಾಸನನ್ನು ಹೆಚ್ಚು ಜನರಿಗೆ ಪರಿಚಯಿಸಿದರು. ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ರಾಜ್‍ಕುಮಾರ್ ಅವರ ಅಭಿನಯ ರೋಮಾಂಚನ ಉಂಟು ಮಾಡುತ್ತದೆ. ಅಂತಹ ಕಲಾವಿದ ಮತ್ತೊಮ್ಮೆ ಹುಟ್ಟುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಕøತ ಮೇಘದೂತ ಕವಿಯನ್ನು ಲೇಖಕ ಪುರುಷೋತ್ತಮ ದಾಸ ಹೆಗ್ಡೆ ಅವರು ವಿಭಿನ್ನ ಕೋನಗಳ ಮೂಲಕ ಸೃಷ್ಟಿಸಿರುವ ಪುಸ್ತಕ ಹೊರ ತಂದಿದ್ದಾರೆ. ಸಂಸ್ಕøತ ಗ್ರಂಥವನ್ನು ಅನುವಾದಿಸುವುದು ಸುಲಭದ ಕಾರ್ಯವಲ್ಲ. ಅಂತಹ ಕಾರ್ಯವನ್ನು ಹೆಗ್ಡೆಯವರು ಮಾಡಿದ್ದಾರೆ. ಮೇಘದೂತ ಪ್ರೀತಿ-ಪ್ರೇಮವನ್ನು ನಿವೇದನೆ ಮಾಡಿಕೊಳ್ಳುವ ವಸ್ತುವನ್ನು ಈ ಕೃತಿ ಒಳಗೊಂಡಿದೆ. ಮೇಘವೇ ದೂತ. ನಳದಂಪತಿಯ ಕೃತಿಯಲ್ಲಿ ಹಂಸಪಕ್ಷಿಯೇ ದೂತ. ಹಾಗೆಯೇ ರಾಮಾಯಣದಲ್ಲಿ ರಾಮನಿಗೆ ಹನುಮಂತ ದೂತ ಎಂದು ವ್ಯಾಖ್ಯಾನಿಸಿದರು.

ಕಾರ್ಯಕ್ರಮದಲ್ಲಿ ಕಾಳಿದಾಸ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸಂಘದ ಅಧ್ಯಕ್ಷ ಟಿ.ದೇವರಾಜ, ಕವಿ ಹಾಗೂ ಸಂಸ್ಕøತಿ ಚಿಂತಕ ಪ್ರೊ.ನಾರಾಯಣಘಟ್ಟ, ಸುವರ್ಣಮುಖಿ ಸಂಸ್ಕøತಿ ಧಾಮದ ಆಚಾರ್ಯ ನಾಗರಾಜ್, ಕುರುಬರ ಸಂಘದ ಕಾರ್ಯಾಧ್ಯಕ್ಷ ಲಿಂಗಪ್ಪ, ಲೋಕೋಪಯೋಗಿ ಪ್ರಧಾನ ಇಂಜಿನಿಯರ್ ಗುರುಪಾದ ಸ್ವಾಮಿ, ಸಂಘದ ಕಾರ್ಯದರ್ಶಿ ದೊಡ್ಡೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

Facebook Comments