“ನಮಗೆ ಸಂತೋಷವಾಗಿದೆ, ಜನ ನಮ್ಮನ್ನು ಮತ್ತೆ ಸ್ವೀಕರಿಸುತ್ತಾರೆ”

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.13-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನವೇ ನಾವು ಉಪಚುನಾವಣೆಯನ್ನು ಎದುರಿಸಲು ನಿರ್ಧಾರ ಮಾಡಿದ್ದೆವು. ಸುಪ್ರೀಂಕೋರ್ಟ್ ಸ್ಪೀಕರ್ ಆದೇಶವನ್ನು ಬದಿಗೆ ಸರಿಸಿ ನಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದರಿಂದ ನಮಗೆ ಸಂತೋಷವಾಗಿದೆ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಮತ್ತು ಸ್ಪೀಕರ್ ಅವರು ನಮ್ಮನ್ನು ಮೂರೂವರೆ ವರ್ಷಗಳ ಕಾಲ ರಾಜಕೀಯದಿಂದ ದೂರವಿಡುವ ಪ್ರಯತ್ನ ಮಾಡಿದರು. ಆದರೆ ಸುಪ್ರೀಂಕೋರ್ಟ್ ಅದಕ್ಕೆ ಅವಕಾಶ ನೀಡಿಲ್ಲ ಎಂದಿದ್ದಾರೆ.

ತೀರ್ಪನ್ನು ನಾವು ಗೌರವಿಸುತ್ತೇವೆ, ನಮಗೆ ಸಂತೋಷವಾಗಿದೆ. ಸ್ಪೀಕರ್ ಅಸಂವಿಧಾನಿಕ ತೀರ್ಪನ್ನು ಖಂಡಿಸಿ ನ್ಯಾಯಾಲಯ ತಮಗೆ ನ್ಯಾಯ ನೀಡಿದೆ ಎಂದರು. ಉಪಚುನಾವಣೆಯಲ್ಲಿ ನಾವು ಸ್ಪರ್ಧಿಸುತ್ತೇವೆ, ಜನ ನಮ್ಮನ್ನು ಸ್ವೀಕರಿಸುತ್ತಾರೆ. ಈ ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ಜನ ಪರಾಮರ್ಶೆ ಮಾಡಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪನ್ನು ಸಹ ಗಮನಿಸಿದ್ದಾರೆ ಎಂದು ಹೇಳಿದರು. ಯಾವ ಪಕ್ಷದಿಂದ ಸ್ಪರ್ಧಿಸುತ್ತೇವೆ ಎಂಬುದನ್ನು ಕಾದು ನೋಡಿ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Facebook Comments