ಜಿ.ಟಿ.ದೇವೇಗೌಡ ನಿವಾಸಕ್ಕೆ ಎಚ್.ವಿಶ್ವನಾಥ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ನ.19- ಉಪಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವುದಾಗಿ ಹೇಳಿರುವ ಶಾಸಕ ಜಿ.ಟಿ.ದೇವೇಗೌಡ ಅವರ ಮನವೊಲಿಸಲು ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಅವರು ಇಂದು ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಹುಣಸೂರು ಕ್ಷೇತ್ರ ಹೈ ವೋಲ್ಟೇಜ್ ಕಣವಾಗಿ ಮಾರ್ಪಟ್ಟಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ತಮ್ಮದೇ ಆದ ಕಾರ್ಯತಂತ್ರ ರೂಪಿಸಿ ಜನರ ಮನಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.

ಈಗಾಗಲೇ ಜೆಡಿಎಸ್‍ನಿಂದ ಒಂದು ಹೆಜ್ಜೆ ಆಚೆ ಬಂದಿರುವ ಮತ್ತು ಅಂತರ ಕಾಯ್ದುಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಮೂಲತಃ ಹುಣಸೂರಿನವರಾಗಿದ್ದು, ತಮ್ಮದೇ ಆದ ವರ್ಚಸ್ಸು ಹಾಗೂ ಮತಬ್ಯಾಂಕ್ ಹೊಂದಿದ್ದಾರೆ.

ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ಇವರ ಬೆಂಬಲ ಸಿಕ್ಕರೆ ತಮ್ಮ ಗೆಲುವು ಸಲೀಸಾಗಲಿದೆ ಎಂದು ಅರಿತಿರುವ ವಿಶ್ವನಾಥ್ ಅವರು ಇಂದು ಅವರ ನಿವಾಸಕ್ಕೆ ಭೇಟಿ ನೀಡಿ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಈಗಾಗಲೇ ಕುರುಬ ಸಮುದಾಯದ ಮಾಜಿ ಸಂಸದ ವಿಜಯಶಂಕರ್ ಅವರು ಬಿಜೆಪಿಗೆ ಮರಳಿರುವುದರಿಂದ ಬಲ ಹೆಚ್ಚಿದೆ. ಸಂಸದ ಪ್ರತಾಪ್‍ಸಿಂಹ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಕೂಡ ಸಾಥ್ ನೀಡುತ್ತಿರುವ ನಡುವೆಯೇ ಜೆಡಿಎಸ್‍ನ ಅತೃಪ್ತ ಬಣವನ್ನು ತನ್ನತ್ತ ಸೆಳೆಯಲು ವಿಶ್ವನಾಥ್ ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

Facebook Comments