ಮೈಸೂರಿನಲ್ಲಿ ಗಲಭೆಗೆ ಕಾಂಗ್ರೆಸ್‍ ಪ್ರಚೋದನೆ ನೀಡುತ್ತಿದೆ : ಎಚ್.ವಿಶ್ವನಾಥ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಡಿ.19- ಕೋಮು ಗಲಭೆಗೆ ಪ್ರಚೋದನೆ ನೀಡಲು ಕಾಂಗ್ರೆಸ್‍ನವರು ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದರು.
ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಸ್ಲಿಮರು ಅನಗತ್ಯ ಹೇಳಿಕೆಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

ಮುಸ್ಲಿಮರಿಗೆ ಕೇಂದ್ರ ಸರ್ಕಾರದ ನೂತನ ಕಾಯ್ದೆಯಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಬಾಂಗ್ಲಾ ಹಾಗೂ ಪಾಕಿಸ್ತಾನದಿಂದ ವಲಸೆ ಬಂದಿರುವ ಮುಸ್ಲಿಮರಿಗೆ ಮಾತ್ರ ಪೌರತ್ವ ಕಾಯ್ದೆ ಅನ್ವಯವಾಗಲಿದೆ. ಆದರೆ ಕಾಂಗ್ರೆಸ್‍ನವರು ಕೋಮು ಗಲಭೆಗೆ ಪ್ರಚೋದನೆ ಮುಂದಾಗಿದ್ದಾರೆ. ಇದರಿಂದ ಅವರಿಗೆ ಯಾವುದೇ ಲಾಭವಾಗುವುದಿಲ್ಲ ಎಂದು ಹೇಳಿದರು.

ಕಾಯ್ದೆ ವಿಷಯದಲ್ಲಿ ವಿರೋಧ ಪಕ್ಷಗಳು ಅನಗತ್ಯವಾಗಿ ರಾಜಕೀಯ ಮಾಡುತ್ತಿವೆ ಎಂದು ದೂರಿದ ಅವರು, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಇರುವುದರಿಂದ ಈ ವಿಷಯದ ಬಗ್ಗೆ ಹೆಚ್ಚಿನ ಗಲಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುತ್ತಿಗೆದಾರರಿಗೆ ನೆರವಾಗಲು ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದ್ದರು. ಅಲ್ಲಿ ಉತ್ತಮ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಇಂದಿರಾ ಕ್ಯಾಂಟೀನ್‍ಗಿಂತ ನ್ಯಾಯಾಲಯದ ಮುಂಭಾಗದಲ್ಲಿರುವ ಫುಟ್‍ಪಾತ್‍ನಲ್ಲೇ ಗುಣಮಟ್ಟದ ಆಹಾರ ಸಿಗುತ್ತಿದೆ.

ಹಾಗಾಗಿ ಇಂತಹ ವ್ಯಾಪಾರಿಗಳಿಗೆ ಇಂತಹ ಟೆಂಡರ್ ನೀಡಿದರೆ ಒಳ್ಳೆಯ ಆಹಾರ ಸಿಗುತ್ತದೆ. ಇಂದಿರಾ ಕ್ಯಾಂಟೀನ್‍ನ ಕಳಪೆ ಆಹಾರದಿಂದಾಗಿ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟವಾಗಿದೆ. ಆದ್ದರಿಂದ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರದ್ದುಗೊಳಿಸಬೇಕೆಂದು ಸರ್ಕಾರವನ್ನು ವಿಶ್ವನಾಥ್ ಒತ್ತಾಯಿಸಿದರು.

ಹುಣಸೂರು ಪ್ರತ್ಯೇಕ ಜಿಲ್ಲೆಯಾಗುವುದು ನನ್ನ ಗುರಿಯಾಗಿದೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸತ್ಯ ಹೇಳಿದರೆ ಚುನಾವಣೆಯಲ್ಲಿ ಸೋಲನುಭವಿಸಬೇಕಾಗುತ್ತದೆ ಎಂದು ತಮ್ಮ ಸೋಲಿನ ಬಗ್ಗೆ ಮಾರ್ಮಿಕವಾಗಿ ವ್ಯಾಖ್ಯಾನ ಮಾಡಿದರು.

Facebook Comments