ಪೂರ್ಣ ಪ್ರಮಾಣದ ಮಂತ್ರಿ ಮಂಡಲ ರಚಿಸದೆ ಪ್ರಜಾಸತ್ತೆಗೆ ಧಕ್ಕೆ : ಎಚ್.ವಿಶ್ವನಾಥ್ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ, ನ.29- ಪೂರ್ಣ ಪ್ರಮಾಣದ ಮಂತ್ರಿ ಮಂಡಲ ರಚನೆ ಮಾಡದ ಮುಖ್ಯಮಂತ್ರಿಗಳ ಕ್ರಮ ಪಕ್ಷದ ಆಂತರಿಕ ಪ್ರಜಾಸತ್ತೆಗೆ ಧಕ್ಕೆಯುಂಟು ಮಾಡಿದೆ ಎಂದು ಬಿಜೆಪಿಯ ಹಿರಿಯ ನಾಯಕ ಎಚ್.ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಬಿಪಿಎಸ್‍ಸಿ ಶಾಲಾ ಆವರಣದಲ್ಲಿ ಹಿರಿಯ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಅವರ ದುಡ್ಡಿಗೆ ಸೋತ ಭಾರತ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಳೆದ ಇಪ್ಪತ್ತು ವರ್ಷಗಳಿಂದ ಮುಖ್ಯಮಂತ್ರಿಗಳಾದವರು ಪೂರ್ಣ ಪ್ರಮಾಣದಲ್ಲಿ ಮಂತ್ರಿ ಮಂಡಲ ರಚಿಸುತ್ತಿಲ್ಲ. ಇದು ಆಂತರಿಕ ಪ್ರಜಾಸತ್ತೆಯನ್ನು ನಾಶ ಮಾಡಿ ಗುಲಾಮಗಿರಿ ಸಂಸ್ಕøತಿಯನ್ನು ಬೆಳೆಸುತ್ತಿದೆ ಎಂದು ಟೀಕಿಸಿದರು.

ಮಂತ್ರಿ ಮಂಡಲ ರಚಿಸಿದಾಗಲೆಲ್ಲ ನಾಲ್ಕೈದು ಮಂತ್ರಿ ಸ್ಥಾನಗಳನ್ನು ಭರ್ತಿ ಮಾಡದೆ ಇರುವುದರಿಂದ ಮಂತ್ರಿ ಪದವಿ ಆಕಾಂಕ್ಷಿಗಳು ಅಕಾರ ಇಂದಲ್ಲ, ನಾಳೆ ಸಿಗಬಹುದು ಎಂದು ಕಾಯುತ್ತಾ ಧ್ವನಿ ಕಳೆದುಕೊಳ್ಳುತ್ತಾರೆ. ಇದು ಏಕಕಾಲಕ್ಕೆ ಸರ್ಕಾರದ ಭದ್ರತೆಯ ಬಗ್ಗೆ ಅನುಮಾನ ಮೂಡಿಸುತ್ತದೆ. ಪ್ರಗತಿಗೆ ಅಡ್ಡಗಾಲಾಗುತ್ತದೆ. ಅಭಿವೃದ್ಧಿ ಕಡೆಗಿನ ಓಟ ಕುಂಠಿತವಾಗುವಂತೆ ಮಾಡುತ್ತದೆ ಎಂದರು.

ಹೀಗೆ ಆಂತರಿಕ ಪ್ರಜಾಸತ್ತೆ ನಾಶವಾಗುವುದು ಒಳ್ಳೆಯದಲ್ಲ ಎಂದ ಅವರು ಪ್ರತಿಯೊಂದು ರಾಜಕೀಯ ಪಕ್ಷಗಳಲ್ಲೂ ಆಂತರಿಕ ಪ್ರಜಾಸತ್ತೆಯನ್ನು ನಾಶ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆದುಬಂದಿದೆ ಎಂದು ಹೇಳಿದರು. ಮುಖ್ಯಮಂತ್ರಿ ಯಡಿಯೂರಪ್ಪ, ಮತ್ತವರ ಮಗನ ಬಳಿ, ದೇವೇಗೌಡ-ಕುಮಾರಸ್ವಾಮಿ ಬಳಿ, ಸಿದ್ಧರಾಮಯ್ಯ-ಡಿ.ಕೆ.ಶಿವಕುಮಾರ್ ಬಳಿ ಆಂತರಿಕ ಪ್ರಜಾಸತ್ತೆಯ ಕುರಿತು ಮಾತನಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳಾದವರು ತಮ್ಮ ಕೈಲಿ ಹಲವು ಖಾತೆಗಳನ್ನು ಇಟ್ಟುಕೊಂಡು ಅವು ಶಕ್ತಿ ಕಳೆದುಕೊಳ್ಳುವಂತೆ ಮಾಡುತ್ತಾರೆ. ನಾನು ಕುಮಾರಸ್ವಾಮಿಯವರು ಅಕಾರದಲ್ಲಿದ್ದಾಗ ಇದನ್ನೇ ಹೇಳಿದ್ದೆ . ಆದರೆ, ಇದರಿಂದ ಅವರು ಕೋಪಗೊಂಡು ನಾನು ಕೆಲಸ ಮಾಡಲು ಅಶಕ್ತನೇ ಎಂದು ಪ್ರಶ್ನಿಸಿದ್ದರು ಎಂದು ವಿಷಾದಿಸಿದರು. ನಾನು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದು ಪಕ್ಷದ ನಾಯಕರ ಧೋರಣೆಯ ವಿರುದ್ಧವೇ ಹೊರತು ಹಣದಾಸೆಗಾಗಿ ಅಲ್ಲ.

ಅದ್ಯಾರೋ ಅಯೋಗ್ಯ ನಾನು ಇಪ್ಪತ್ತೈದು ಕೋಟಿಗೆ ಮಾರಾಟವಾಗಿರುವುದಾಗಿ ಹೇಳಿದ. ಅದನ್ನೇ ಎಲ್ಲರೂ ನಂಬಿದರು. ನನ್ನನ್ನು ನಾಶ ಮಾಡಲು ಹೊರಟರು. ಆದರೆ, ನಾಯಕನನ್ನು ಹೀಗೆ ನಾಶ ಮಾಡುವ ಯತ್ನ ಪ್ರಜಾಪ್ರಭುತ್ವಕ್ಕೆ ಮಾರಕ ಎಂದ ಅವರು:ನಾನೊಬ್ಬ ಸುಡುಗಾಡು ಸಿದ್ಧ ಇದ್ದಂತೆ.ನನಗೆ ಕಾಣಿಸುವ ಸತ್ಯವನ್ನು ನಿರ್ಭೀಡೆಯಿಂದ ಹೇಳುತ್ತೇನೆ.ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಭಾರತ ಎಷ್ಟೇ ಸೋಲು ಕಾಣಲಿ. ಆದರೆ ಅದು ಮರಳಿ ತಲೆ ಎತ್ತಿ ನಿಲ್ಲುವಂತೆ ಮಾಡಲು ಮತದಾರನಿಗೆ ಸಾಧ್ಯವಿದೆ.ಅದರೆ ಅಂತಹ ಮತದಾರನನ್ನು ರಾಜಕೀಯ ವ್ಯವಸ್ಥೆ ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂದು ಪ್ರಶ್ನಿಸಿದರು.
ಇವತ್ತು ಜಾತಿ, ಮತ, ಪಂಥಕ್ಕೊಂದು ಎಂಬಂತೆ ಪ್ರಾಕಾರ, ಅಭಿವೃದ್ಧಿ ನಿಗಮ ಸ್ಥಾಪಿಸಲಾಗುತ್ತಿದೆ. ಇದು ಮೂಗಿಗೆ ತುಪ್ಪ ಹಚ್ಚುವ ಕ್ರಮವೇ ಹೊರತು ಇನ್ನೇನಲ್ಲ ಎಂದರು.

ದೇವರಾಜ ಅರಸರಂತಹ ನಾಯಕರು ಮೇಲ್ವರ್ಗದವರನ್ನು ವಿಶ್ವಾಸಕ್ಕೆ ಪಡೆದು ಕೆಳವರ್ಗದವರ ಹಿತ ಕಾಪಾಡಿದರು. ಆದರೆ, ಇವರು ಮೇಲ್ವರ್ಗದವರ ಹಿತ ಕಾಪಾಡುತ್ತೇವೆ ಎಂದು ಹೊರಟಿದ್ದಾರೆ. ಸಾಮಾಜಿಕ ನ್ಯಾಯದ ಅರ್ಥ ಗೊತ್ತಿದ್ದವರು ಇಂತಹ ಹೆಜ್ಜೆ ಇಡುವುದಿಲ್ಲ ಎಂದು ವಿಶ್ವನಾಥ್ ಹೇಳಿದರು.

ಕೃತಿಯ ಲೇಖಕ ಆರ್.ಟಿ.ವಿಠ್ಠಲಮೂರ್ತಿ ಮಾತನಾಡಿ, ದೇಶದ ಅಲ್ಪ ಪ್ರಮಾಣದ ಜನ ಬಹುಸಂಖ್ಯಾತರನ್ನು ಶೋಷಿಸಿ ಭಾರತ ದುಡ್ಡಿಗೆ ಸೋಲುವಂತೆ ಮಾಡಿದರು ಎಂದರು. ಶೋಷಕರು ದುಡ್ಡಿಗಾಗಿ ಶೋಷಣೆ ನಡೆಸಿ ಮಾನವೀಯತೆಯ ನೆಲೆಯಲ್ಲಿ ಸೋತರು. ಬಹುಸಂಖ್ಯಾತರು ತಮ್ಮ ಅಗತ್ಯದಷ್ಟನ್ನು ಗಳಿಸಲಾಗದೆ ನಿರಾಶರಾಗಿ ಸೋತರು ಎಂದು ತಿಳಿಸಿದರು. ಅನ್ನಪೂರ್ಣ ಪ್ರಕಾಶನದ ಸಿರಿಗೇರಿ ಯರಿಸ್ವಾಮಿ ಹಾಗೂ ಮಹಿಪಾಲ್ ಅವರು ಉಪಸ್ಥಿತರಿದ್ದರು.

Facebook Comments

Sri Raghav

Admin