ಮಾತು ತಪ್ಪಿದ ಯಡಿಯೂರಪ್ಪ, ಸಿದ್ದರಾಮಯ್ಯಗೆ ಕೃತಜ್ಞತೆ ಇಲ್ಲ: ಎಚ್.ವಿಶ್ವನಾಥ್ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜ.13- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಇಲ್ಲ. ಇವರೆಲ್ಲ ಮಾತು ತಪ್ಪಿದ ನಾಯಕರು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಲವರ ವಿರೋಧದ ನಡುವೆಯೂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‍ಗೆ ಕರೆತಂದು ಎಲ್ಲರನ್ನು ಒಪ್ಪಿಸಿ ಪ್ರತಿಪಕ್ಷ ನಾಯಕನಿಂದ ಮುಖ್ಯಮಂತ್ರಿಯಾಗುವವರೆಗೂ ಕಣ್ಗಾವಲಾಗಿದ್ದೆವು. ಸಿದ್ದರಾಮಯ್ಯ ಎಲ್ಲಿಯೂ ವಿಶ್ವನಾಥ್ ಮತ್ತು ಅವರ ಸ್ನೇಹಿತರಿಂದ ನನಗೆ ಅವಕಾಶ ಸಿಕ್ಕಿತು ಎಂದು ಹೇಳಲಿಲ್ಲ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಮತ್ತು ಬಿಜೆಪಿ ಸರ್ಕಾರಕ್ಕೆ ಬರಲು ನಾವು 17 ಮಂದಿ ಕಾರಣ. ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದ ಮೇಲೆ ಬೇರೆಯವರಿಗೂ ಧೈರ್ಯ ಬಂತು. ನನ್ನನ್ನು ಮಂತ್ರಿ ಮಾಡಿ ಎಂದು ಪದೇ ಪದೇ ಕೇಳುವುದಿಲ್ಲ. ಒಂದು ಬಾರಿ ಯಡಿಯೂರಪ್ಪ ಅವರನ್ನು ಕೇಳಿದಾಗ ನಿಮ್ಮನ್ನು ಬಿಟ್ಟು ಇನ್ಯಾರನ್ನು ಮಂತ್ರಿ ಮಾಡಲು ಸಾಧ್ಯ ಎಂದಿದ್ದರು. ಅಮಿತ್ ಶಾ ಕೂಡ 17 ಮಂದಿಯ ಹಿತರಕ್ಷಣೆ ಮಾಡುವುದಾಗಿ ಹೇಳಿದ್ದರು. ಹೀಗ ಏನಾಗುತ್ತಿದೆ ಎಂದು ಪ್ರಶ್ನಿಸಿದರು.

ನಾಗೇಶ್ ಅವರನ್ನು ಸಂಪುಟದಿಂದ ಕೈ ಬಿಡಲು ತುದಿಗಾಲಲ್ಲಿ ನಿಂತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತ್ಯಾಗ ಮಾಡಿದ ಮುನಿರತ್ನ ಅವರನ್ನು ಕ್ರಿಮಿನಲ್ ಕೇಸಿದೆ ಎಂಬ ನೆಪದಿಂದ ಸಂಪುಟದಿಂದ ಹೊರಗಿಡಲಾಗಿದೆ. ಲಕ್ಷಾಂತರ ಮಂದಿಗೆ ವಂಚಿಸಿದ 420 ಕೇಸಿರುವ ಯೋಗೇಶ್ವರ್ ಅವರನ್ನು ಮಂತ್ರಿ ಮಾಡಲಾಗುತ್ತಿದೆ. ನಾವು ಬಾಂಬೆ ಅಲ್ಲಿ ಇಲ್ಲಿ ಓಡಾಡುವಾಗ ನಮ್ಮ ಜತೆ ಯೋಗೇಶ್ವರ್ ಬ್ಯಾಗ್ ಹಿಡಿದುಕೊಂಡು ಓಡಾಡುತ್ತಿದ್ದರು. ಈ ಸರ್ಕಾರಕ್ಕೆ ಬಹುಮತ ಇರಲಿಲ್ಲ. ನಮ್ಮ ಬಿಕ್ಷೆ ಹಾಗೂ ಮರ್ಜಿಯಿಂದ ಅಧಿಕಾರಕ್ಕೆ ಬಂದಿದೆ.

ಬಿಜೆಪಿಯ ಮೂಲ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ನಿಜ. ಆದರೆ, ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ 17 ಮಂದಿಗೆ ಸ್ಥಾನ ಕೊಟ್ಟು ನಂತರ ಉಳಿದ ಅವಕಾಶಗಳನ್ನು ಪಕ್ಷದವರಿಗೆ ಕೊಡಬೇಕು ಎಂದು ಪ್ರತಿಪಾದಿಸಿದರು.

ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಿಲ್ಲ. ಯಡಿಯೂರಪ್ಪ ಅವರನ್ನು ಬೆಂಬಲಿಸಿ ಲಿಂಗಾಯಿತ ಸಮುದಾಯದ ಬಿ.ಸಿ.ಪಾಟೀಲ್ ಮತ್ತು ಮಹೇಶ್ ಕುಮಟಳ್ಳಿ ಇಬ್ಬರು ಮಾತ್ರ ಬಾಂಬೆಗೆ ಬಂದಿದ್ದರು. ಕುರುಬ ಸಮುದಾಯದ 4ಮಂದಿ ರಾಜೀನಾಮೆ ನೀಡಿದ್ದರು. ಯಡಿಯೂರಪ್ಪ ಅವರಿಗೆ ಎಲ್ಲವೂ ಗೊತ್ತು. ಗೊತ್ತಿದ್ದೇ ಅವರು ಈ ರೀತಿ ಮಾಡುತ್ತಿದ್ದಾರೆ. ಯೋಗೇಶ್ವರ್ ಬ್ಲಾಕ್‍ಮೇಲ್ ಮಾಡಿ ಸಚಿವರಾಗುತ್ತಿದ್ದಾರೆ. ಯಡಿಯೂರಪ್ಪ ಅವರು ಯಾವುದೋ ವಿಚಾರಕ್ಕೆ ಸಂತೋಷ್ ಮತ್ತು ಯೋಗೇಶ್ವರ್ ಕೈಗೆ ಸಿಲುಕಿಕೊಂಡಿದ್ದಾರೆ ಎಂದು ಆರೋಪಿಸಿದರು.

ವಿಧಾನಸೌಧದಲ್ಲಿ ಯಡಿಯೂರಪ್ಪ ಅವರ ಕುಟುಂಬದ ಸದಸ್ಯರೇ ದರ್ಬಾರ್ ಮಾಡುತ್ತಿದ್ದಾರೆ. ಕುಟುಂಬದ ರಾಜಕಾರಣ ರಾಷ್ಟ್ರದಲ್ಲಿ ಅಂತ್ಯಗೊಳ್ಳಬೇಕೆಂದು ಮೋದಿ ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments