ಬಿಎಸ್‍ವೈ ಭೇಟಿ ಮಾಡಿದ ಎಚ್.ವಿಶ್ವನಾಥ್, ಮೈಸೂರು ಜಿಲ್ಲೆ ವಿಭಜನೆಗೆ ಮನವಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.14- ಗಣಿ ಜಿಲ್ಲೆ ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ವನ್ನು ಹೊಸ ಜಿಲ್ಲೆಯಾಗಿಸುವ ಬೇಡಿಕೆ ಬೆನ್ನಲ್ಲೇ ಇದೀಗ ಸಾಂಸ್ಕøತಿಕ ನಗರಿ ಮೈಸೂರನ್ನು ಇಬ್ಭಾಗಿಸಬೇಕೆಂಬ ಕೂಗು ಎದ್ದಿದೆ. ಮೈಸೂರಿನಿಂದ ಹುಣಸೂರನ್ನು ಬೇರ್ಪಡಿಸಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಹೆಸರಿನ ಜಿಲ್ಲೆಯನ್ನು ರಚನೆ ಮಾಡಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾಜಿ ಸಚಿವ ಎಚ್.ವಿಶ್ವನಾಥ್ ಮನವಿ ಮಾಡಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಬಿಎಸ್‍ವೈ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ವಿಶ್ವನಾಥ್, ಮೈಸೂರು ಸಾಕಷ್ಟು ದೊಡ್ಡ ಜಿಲ್ಲೆಯಾಗಿರುವ ಹಿನ್ನೆಲೆಯಲ್ಲಿ ಇದನ್ನು ವಿಭಜಿಸಿ ಹುಣಸೂರನ್ನು ನೂತನ ಜಿಲ್ಲೆ ಮಾಡಬೇಕೆಂಬ ಬೇಡಿಕೆಯನ್ನಿಟ್ಟಿದ್ದಾರೆ.

ಹುಣಸೂರಿಗೆ ಕೆ.ಆರ್.ನಗರ, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಸಾಲಿಗ್ರಾಮ, ಸರಗೂರು ತಾಲ್ಲೂಕುಗಳನ್ನು ಸೇರ್ಪಡೆ ಮಾಡಿ ದೇವರಾಜ ಅರಸು ಜಿಲ್ಲೆ ಮಾಡಬೇಕೆಂಬ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಆದರೆ ಇದಕ್ಕೆ ಮುಖ್ಯಮಂತ್ರಿಯವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಇದು ಬಹುದಿನಗಳ ಬೇಡಿಕೆಯಾಗಿದೆ. ಮೈಸೂರು ಭೌಗೋಳಿಕವಾಗಿ ಸಾಕಷ್ಟು ದೊಡ್ಡ ಜಿಲ್ಲೆಯಾಗಿರುವುದರಿಂದ ವಿಭಜಿಸುವುದು ಸರಿಯಾದ ನಿರ್ಧಾರ ಎಂದಿದ್ದಾರೆ.

ನಾನು ಮುಖ್ಯಮಂತ್ರಿಯವರಿಗೆ ಜಿಲ್ಲೆಯ ಹುಣಸೂರಿನ ಜನತೆಯ ಪರವಾಗಿ ಮನವಿ ಮಾಡುತ್ತೇನೆ. ಇದಕ್ಕೆ ಅವರು ಸಕರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬೆಳಗಾವಿಯಲ್ಲಿ ಚಿಕ್ಕೋಡಿ, ಗೋಕಾಕ್, ಬಳ್ಳಾರಿಯಲ್ಲಿ ವಿಜಯನಗರ, ತುಮಕೂರಿನಲ್ಲಿ ಮಧುಗಿರಿ, ಪಾವಗಡ ತಾಲ್ಲೂಕುಗಳನ್ನು ಹೊಸ ಜಿಲ್ಲೆ ಮಾಡಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದೆ.

ಇದರ ನಡುವೆಯೇ ಮೈಸೂರನ್ನು ವಿಭಜಿಸಲು ವಿಶ್ವನಾಥ್ ಬೇಡಿಕೆ ಇಟ್ಟಿರುವ ಹಿಂದೆ ರಾಜಕೀಯ ವಾಸನೆ ಕಂಡುಬಂದಿದೆ. ಹೇಳಿಕೇಳಿ ಮೈಸೂರು ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ತವರು ಜಿಲ್ಲೆ.

ಮೈಸೂರನ್ನು ವಿಭಜಿಸಿದರೆ ಹುಣಸೂರನ್ನು ನೂತನ ಜಿಲ್ಲೆಯನ್ನಾಗಿ ಮಾಡಿದರೆ ಸಿದ್ದರಾಮಯ್ಯನವರ ರಾಜಕೀಯ ಪ್ರಭಾವವನ್ನು ಕುಗ್ಗಿಸಬಹುದು ಎಂಬ ಲೆಕ್ಕಾಚಾರವು ಇದರಲ್ಲಿ ಅಡಗಿದೆ ಎಂಬ ಮಾತು ಕೇಳಿಬರುತ್ತಿದೆ. ಅಂತಿಮವಾಗಿ ಮುಖ್ಯಮಂತ್ರಿ ಬಿಎಸ್‍ವೈ ತೆಗೆದುಕೊಳ್ಳುವ ನಿರ್ಧಾರದ ಮೇಲೆಯೇ ಇವೆಲ್ಲವೂ ಅವಲಂಬಿತವಾಗಿವೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin