ಸಿದ್ದರಾಮಯ್ಯನವರಿಗೆ ಈ ದುಸ್ಥಿತಿ ಬರಬಾರದಿತ್ತು : ಎಚ್.ವಿಶ್ವನಾಥ್ ವ್ಯಂಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.25- ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳುವ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಕ್ಷೇತ್ರ ಹುಡುಕುವಂತಹ ದುಸ್ಥಿತಿ ಬರಬಾರದಿತ್ತು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಚುನಾವಣೆಗೆ ಹೋದರೆ ಕಾಂಗ್ರೆಸ್ ಪಕ್ಷ 150 ಸ್ಥಾನ ಗೆಲ್ಲಲಿದೆ ಎಂದು ಅವರ ಶಿಷ್ಯಂದಿರು ಹೇಳುತ್ತಿದ್ದಾರೆ. ಅಕಾರಕ್ಕೆ ಬರುವುದಿರಲಿ ನಿಮ್ಮ ನಾಯಕನಿಗೆ ಯಾವ ಕ್ಷೇತ್ರ ಇದೆ ಎಂದು ಪ್ರಶ್ನೆ ಮಾಡಿದರು.

ಈಗ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಹೋದರೆ 150 ಸ್ಥಾನ ಬರುತ್ತದೆ ಎನ್ನುವವರು 2018ರ ಚುನಾವಣೆಯಲ್ಲಿ ಕಾಂಗ್ರೆಸ್ 132 ಸ್ಥಾನದಿಂದ 70 ಸ್ಥಾನಕ್ಕೆ ಏಕೆ ಬಂದಿತು? ಆಗಲೂ ಕೂಡ ನಿಮ್ಮ ನಾಯಕರೇ ಮುಂದಾಳತ್ವ ವಹಿಸಿರಲಿಲ್ಲವೇ? ಎಂದು ಕುಟುಕಿದರು.

ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಮತ್ತು ಮತ್ತೆ ಸಿಎಂ ಆಗಬೇಕೆಂದು ಕನಸು ಕಾಣುತ್ತಿರುವವರಿಗೆ ಕ್ಷೇತ್ರ ಹುಡುಕುವಂತಹ ಸ್ಥಿತಿ ಬರಬಾರದಿತ್ತು. ಅವರ ಶಿಷ್ಯಂದಿರೇ ಈ ಆಟ ಆಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಇನ್ನು ಚುನಾವಣೆಗೆ 2 ವರ್ಷ ಅವ ಇರುವಾಗಲೇ ಸಿದ್ದರಾಮಯ್ಯ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುವುದು ಅಭಾಸವಾಗುತ್ತದೆ. ಸಿಎಂ ಸ್ಥಾನ ಎನ್ನುವುದು ಪತ್ರಾವಳಿಯೂ ಅಲ್ಲ ಅಥವಾ ಉಂಡು ಬಿಸಾಡುವುದು ಅಲ್ಲ ಎಂದು ತಿರುಗೇಟು ನೀಡಿದರು.

ಯಾರು ಸಾರ್ವಜನಿಕ ಜೀವನದಲ್ಲಿ ಸ್ವಚ್ಛವಾಗಿರುತ್ತಾರೋ ಅಂಥವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು. ಸಿದ್ದರಾಮಯ್ಯ ಬೇರೆ ಪಕ್ಷದಿಂದ ಬಂದು ಈಗಾಗಲೇ ಸಿಎಂ ಆಗಿದ್ದಾರೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಅವರಿಗೆ ಅವಕಾಶ ಕೊಡಬೇಕು ಎಂದು ಹೇಳಿದರು.

ಈಗಾಗಲೇ ಸಿದ್ದರಾಮಯ್ಯನವರಿಗೆ ಅವಕಾಶ ಸಿಕ್ಕಿರುವುದರಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ.ಪರಮೇಶ್ವರ್ ಸೇರಿದಂತೆ ಅನೇಕರು ಇದ್ದಾರೆ. ಅವರು ಕೂಡ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರೇ ಯಾವುದೇ ಕಾರಣಕ್ಕೂ ನೀವು ಶಾಸಕ ಜಮೀರ್ ಅಹಮ್ಮದ್ ಅವರನ್ನು ಮುಂದಿಟ್ಟುಕೊಂಡು ಹೋಗಬೇಡಿ. ಇದರಿಂದ ನಿಮಗೆ ಒಳ್ಳೆಯದಾಗುವುದಿಲ್ಲ ಎಂದರು.

Facebook Comments

Sri Raghav

Admin