ಸಿದ್ದರಾಮಯ್ಯ ಸಿಎಂ ಆಗೋಕೆ ಚಾನ್ಸೇ ಇಲ್ಲ : ಎಚ್.ವಿಶ್ವನಾಥ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 8-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಲು ಸದ್ಯಕ್ಕೆ ಯಾವ ಮಾರ್ಗವೂ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದ್ದಾರೆ.

ಎಲ್ಲ ಸಮಾನ ಮನಸ್ಕರೂ ಒಗ್ಗೂಡಿದರೂ ಕಾಂಗ್ರೆಸ್‍ಗೆ 113 ಶಾಸಕರ ಬೆಂಬಲ ದೊರೆಯುವುದಿಲ್ಲ. ಹೀಗಾಗಿ ತಕ್ಷಣಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಅವಕಾಶವಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಕೆಲವರು ಹೇಳುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿಯವರು ಇದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿರುವುದು ಸರಿಯಾಗಿದೆ. ಆದರೆ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ವಿಚಾರದಲ್ಲಿ ಹೇಳುತ್ತಿರುವುದು ಸಮಂಜಸವಲ್ಲ ಎಂದರು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಅವರ ಆರೋಪದಿಂದಲೇ ಬಿಜೆಪಿಗೆ ಹೆಚ್ಚು ಸ್ಥಾನಗಳು ಬಂದವು, ಅದಕ್ಕೆ ಜೆಡಿಎಸ್ ಕಾರಣವಲ್ಲ. ಮತ್ತೆ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವುದು ಗೊತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲಾಯಿತು. ಅವರೂ ನಮ್ಮನ್ನು ಸೋಲಿಸಲು ಪ್ರಯತ್ನಿಸಿದರು ಎಂದು ಹೇಳಿದರು.

ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಹಾಗೂ ತಾವು ಸ್ನೇಹಿತರಾಗಿದ್ದು, ಉಭಯ ಕುಶಲೋಪರಿಗಾಗಿ ಭೇಟಿಯಾಗಿದ್ದೆವು. ಸಹಜವಾಗಿಯೇ ರಾಜಕೀಯ ಚರ್ಚೆ ಮಾಡಲಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವುದಾಗಿ ಪ್ರಸಾದ್ ಹೇಳಿದರು ಎಂದರು.

ಚುನಾವಣಾ ಪೂರ್ವ ಹೊಂದಾಣಿಕೆ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಸೀಮಿತವಾಗಿದ್ದು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಂದುವರೆಯುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಮತದಾರರು ಯಾರನ್ನ ಬೆಂಬಲಿಸುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ.

ಸ್ವಯಂಪ್ರೇರಿತರಾಗಿ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮತದಾನದ ಪ್ರಮಾಣ ಹೆಚ್ಚಾಗಿರುವುದನ್ನು ನೋಡಿದರೆ ಆಡಳಿತ ಪಕ್ಷದ ವಿರುದ್ಧ ಮತ ಹಾಕಿರಬಹುದು ಎನ್ನಿಸುತ್ತದೆ. ಆದರೆ ಕೇಂದ ಸರ್ಕಾರದ ವಿರುದ್ಧವೋ, ರಾಜ್ಯ ಸರ್ಕಾರದ ವಿರುದ್ಧವೋ ಗೊತ್ತಾಗುತ್ತಿಲ್ಲ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಗಾಗ್ಗೆ ದೇವಸ್ಥಾನಕ್ಕೆ ಹೋಗುತ್ತಾರೆ, ಆದರೆ ಬಿಜೆಪಿಯವರು ದಿನಬೆಳಗಾದರೆ ದೇವಸ್ಥಾನಕ್ಕೆ ಹೋಗುತ್ತಾರೆ ಎಂದು ಟೀಕಿಸಿದ ಅವರು, ರಾಜ್ಯದ ಮೈತ್ರಿ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶ ಬಂದ ಮೇಲೆ ಏನೇನು ಆಗುತ್ತದೆ ಕಾದುನೋಡೋಣ ಎಂದರು. ಖಾಲಿ ಇರುವ ಸಚಿವ ಸ್ಥಾನಗಳು ಭರ್ತಿಯಾಗಲಿವೆ. ಪ್ರಮುಖ ಖಾತೆಗಳು ಹಂಚಿಕೆಯಾಗುತ್ತವೆ ಎಂದು ಹೇಳಿದರು.

Facebook Comments

Sri Raghav

Admin