ತಮ್ಮ ಕ್ಷೇತ್ರದ ಜನರಿಗೆ ಪತ್ರ ಬರೆದ ಅನರ್ಹ ಶಾಸಕ ಹೆಚ್.ವಿಶ್ವನಾಥ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಜು.28 : ಪಕ್ಷ ವಿರೋಧಿ ಚಟುವಟಿಕೆ ಹಾಗೂ ವಿಪ್ ಉಲ್ಲಂಘನೆ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅನರ್ಹಗೊಂಡಿರುವ ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರು ತಮ್ಮ ಕ್ಷೇತ್ರದ ಜನರಿಗೆ ಪತ್ರ ಬರೆದಿದ್ದು ಅದರ ಸಾರಾಂಶ ಈ ಕೆಳಕಂಡತಿಂದೆ.

ಹುಣಸೂರು ವಿಧಾನಸಭಾ ಕ್ಷೇತ್ರದ ನನ್ನ ಮತದಾರ ಬಂಧುಗಳೇ, ಇತ್ತೀಚೆಗೆ ನಡೆಯುತ್ತಿರುವ ರಾಜ್ಯದ ರಾಜಕೀಯ ವಿದ್ಯಮಾನಗಳು ತಮಗೆ ತಿಳಿದೇ ಇದೆ. ಆದರೆ ಇವುಗಳಿಗೆ ಸಕಾರಣಗಳನ್ನು ನಿಮಗೆ ತಿಳಿಸಲು ನಾನು ಜವಾಬ್ದಾರನಾಗಿದ್ದೇನೆ.

ನನ್ನ ರಾಜಕೀಯ ವಿರೋಧಿಗಳು ಪ್ರಚಾರ ಮಾಡುತ್ತಿರುವಂತೆ ನನ್ನನ್ನು ನಾನು ಮಾರಿಕೊಂಡಿಲ್ಲ. ನೀವು ನನ್ನ ಮೇಲೆ ವಿಶ್ವಾಸವಿಟ್ಟು ದಯಪಾಲಿಸಿದ ಮತಗಳಿಗೂ ಅಪಚಾರ ಮಾಡಿಲ್ಲ. ನಿಮ್ಮ ಪ್ರತೀ ಮತಕ್ಕಾಗಿ ನಿಮಗೆ ಸದಾ ಋಣಿಯಾಗಿದ್ದೇನೆ, ತಲೆ ಬಾಗಿದ್ದೇನೆ.

ನಿಮ್ಮ ಮತದ ಬಲದಿಂದ ಶಾಸಕನಾದ ನನ್ನನ್ನು ಈ ವ್ಯವಸ್ಥೆ ಶೋಷಿಸಿತು, ಅಪಮಾನಿಸಿತು, ಕಡೆಗಣಿಸಿತು. ಅನುಭವ, ಪ್ರಾಮಾಣಿಕತೆ ಮತ್ತು ಹಿರಿತನಕ್ಕೆ ಬೆಲೆಯಿಲ್ಲದಂತಾಯಿತು. ಒಟ್ಟಾರೆ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತಹ ಅನೇಕ ಘಟನೆಗಳು ನಡೆದುಹೋದವು.

ಇವುಗಳನ್ನು ಸಹಿಸಲಾರದೆ ನಾನು ಮತ್ತು ನನ್ನಂತೆ ನೋವುಂಡ ಇತರ ಶಾಸಕ ಮಿತ್ರರು ತಮ್ಮಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ನಡೆ ಮತದಾರರಿಗೆ ನಾನು ತೋರಿದ ನಿರ್ಲಕ್ಷ್ಯವೆಂದು ತಾವು ಭಾವಿಸಬಾರದು.

ಬದಲಾಗಿ ನೀವು ಮತ ಕೊಟ್ಟು ಹರಸಿದ ನಮ್ಮ ಶಾಸಕ ಪದೇ ಪದೇ ಆದ ಅವಮಾನಗಳನ್ನು, ತಾರತಮ್ಯಗಳನ್ನು ನುಂಗಲಾರದೆ ತನ್ನ ಆತ್ಮಗೌರವಕ್ಕಾಗಿ, ಕ್ಷೇತ್ರದ ಜನರ ಸ್ವಾಭಿಮಾನ ಮತ್ತು ಒಳಿತಿಗಾಗಿ ಕೊಟ್ಟ ರಾಜೀನಾಮೆ ಎಂದು ತಾವು ತಿಳಿಯಬೇಕು.

ಇದಾದ ಮೇಲೂ ಈ ದ್ವೇಷಪೂರಿತ ವ್ಯವಸ್ಥೆ ನಮ್ಮನ್ನು ದಮನಿಸಲು ಯತ್ನಿಸಿದೆ. ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ. ನಮ್ಮ ರಾಜಕೀಯ ಮತ್ತು ಸಾರ್ವಜನಿಕ ಬದುಕನ್ನು ಮುಗಿಸುವ ಹುನ್ನಾರಗಳನ್ನು ನಡೆಸಿದೆ. ಈಗ ನಾವು ದೇಶದ ಸರ್ವೋಚ್ಚ ನ್ಯಾಯಲಯದ ಬಾಗಿಲನ್ನು ತಟ್ಟುತ್ತಿದ್ದೇವೆ.

ನಿಮ್ಮನ್ನು ಸದ್ಯದಲ್ಲೇ ಹುಣಸೂರಿನಲ್ಲಿ ಭೇಟಿಯಾಗಿ ಅನೇಕ ವಿಚಾರಗಳನ್ನು ಹಂಚಿಕೊಳ್ಳಲಿದ್ದೇನೆ, ವಾಸ್ತವ ಸಂಗತಿಗಳನ್ನು ತಿಳಿಸಲ್ಲಿದ್ದೇನೆ. ದಯವಿಟ್ಟು ತಾವು ನನ್ನನ್ನು, ನನ್ನ ಜೀವನವನ್ನು ಬಲ್ಲವರಾಗಿದ್ದರಿಂದ ವದಂತಿಗಳಿಗೆ ದಯವಿಟ್ಟು ಕಿವಿಗೊಡಬೇಡಿ.

ನಿಮ್ಮ ಬೆಂಬಲ, ಆಶೀರ್ವಾದ ಸದಾ ನನ್ನ ಮೇಲಿರಲಿ.
ವಿಶ್ವಾಸಗಳೊಂದಿಗೆ
ನಿಮ್ಮ
ಅಡಗೂರು ಎಚ್. ವಿಶ್ವನಾಥ್

Facebook Comments

Sri Raghav

Admin