ಸಾಹಿತಿ, ಸಂಶೋಧಕ ಹ.ಕ.ರಾಜೇಗೌಡರ ನಿಧಾನಕ್ಕೆ ನಿರ್ಮಲಾನಂದನಾಥ ಶ್ರೀಗಳ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.18- ಹಿರಿಯ ಜಾನಪದ ವಿದ್ವಾಂಸ, ಸಂಶೋಧಕ, ಸಾಹಿತಿಗಳಾಗಿದ್ದ ನಾಡಿನ ಹಿರಿಯ ಚೇತನ ಹ.ಕ.ರಾಜೇಗೌಡರು ಇನ್ನಿಲ್ಲವಾದುದು ಅತ್ಯಂತ ನೋವಿನ ಸಂಗತಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಅಪರಿಮಿತ ಪಾಂಡಿತ್ಯವನ್ನು ಹೊಂದಿ ಹತ್ತು ಹಲವು ಕೃತಿಗಳನ್ನು ರಚಿಸಿದ್ದ ಶ್ರೀಯುತರು ಜಾನಪದವನ್ನು ಅಧ್ಯಯನ ಮಾಡುವ ಯುವಪೀಳಿಗೆಯ ಮಾರ್ಗದರ್ಶಕರಾಗಿದ್ದರು ಎಂದು ಶ್ರೀಗಳು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಆದಿಚುಂಚನಗಿರಿ ಕ್ಷೇತ್ರದ ಶ್ರೀ ಗುರು ದೇವತೆಗಳಲ್ಲಿ ಅಪಾರ ಶ್ರದ್ಧಾಭಕ್ತಿಯನ್ನು ಹೊಂದಿದ್ದ ಶ್ರೀಯುತರು ನಮ್ಮ ಸದ್ಗುರುಗಳಾದ ಜಗದ್ಗುರು ಶ್ರೀ ಪದ್ಮಭೂಷಣ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಸೇವಾ ಕೈಂಕರ್ಯಕ್ಕೆ ಮಾರುಹೋಗಿದ್ದರು. ಶ್ರೀ ಕ್ಷೇತ್ರದಲ್ಲಿ ಪದವಿ ಕಾಲೇಜನ್ನು ತೆರೆಯುವಲ್ಲಿ ಅವರ ಕೊಡುಗೆ ಸ್ಮರಣೀಯ. ಕ್ಷೇತ್ರದ ಬಗ್ಗೆ ಜಾನಪದೀಯ ಹಿನ್ನೆಲೆಯ ಸಂಶೋಧನಾತ್ಮಕ ಕೃತಿಯನ್ನೂ ರಚಿಸಿದ್ದರು ಎಂದು ಅವರು ಸ್ಮರಿಸಿದ್ದಾರೆ.

ಪ್ರಸ್ತುತ ಶ್ರೀಮಠದ ವತಿಯಿಂದ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಒಳಗೊಂಡಂತೆ ಸ್ಥಾಪಿಸಿರುವ ವಿಕಸನ ಸಂಸ್ಥೆಯ ಮೂಲಕ 108 ಒಕ್ಕಲಿಗ ಸಾಧಕರ ಬಗ್ಗೆ ಕೃತಿಗಳನ್ನು ಪ್ರಕಟಿಸುವ ಕಾರ್ಯದಲ್ಲಿ ಶ್ರೀಯುತರು ವಹಿಸಿದ ಪ್ರಮುಖ ಪಾತ್ರ ಅವಿಸ್ಮರಣೀಯವಾದುದು.

ಜೊತೆಗೆ ಒಕ್ಕಲಿಗರ ಸಾಧನೆ ಮತ್ತು ನಾಡಪ್ರಭು ಕೆಂಪೇಗೌಡರ ಇತಿಹಾಸವನ್ನು ರಚಿಸಬೇಕೆಂಬ ಶ್ರೀಮಠದ ಸತ್ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರು. ನಾವು ಕಳೆದ ವಾರವಷ್ಟೇ ಶ್ರೀಯುತರ ನಿವಾಸಕ್ಕೆ ತೆರಳಿ ಅವರ ಆರೋಗ್ಯವನ್ನು ವಿಚಾರಿಸಿ ಬಂದಿದ್ದೆವು ಎಂದು ಅವರು ಹೇಳಿದ್ದಾರೆ.

ಶ್ರೀಯುತರು ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪರಿಮಿತ ಕೊಡುಗೆಯನ್ನು ಪರಿಗಣಿಸಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಪ್ರತಿಷ್ಠಿತ ಚುಂಚಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು ಎಂದಿದ್ದಾರೆ. ಶ್ರೀಯುತರ ನಿಧನದಿಂದ ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿದಂತಾಗಿ ಸಾಹಿತ್ಯ ಮತ್ತು ಜಾನಪದ ಕ್ಷೇತ್ರಕ್ಕೆ ಭರಿಸಲಾರದ ನಷ್ಟವುಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಗವಂತನು ಶ್ರೀಯುತರ ನಿಧನದಿಂದ ದುಃಖತಪ್ತರಾಗಿರುವ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವೃಂದಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು, ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಸ್ವಾಮೀಜಿ ಆಶಿಸಿದ್ದಾರೆ.

Facebook Comments

Sri Raghav

Admin