ಕೇಂದ್ರ ಸರ್ಕಾರದ 7 ನೆಟ್‍ವರ್ಕ್ ಸೇರಿ 100 ಸಂಸ್ಥೆಗಳ ಡೇಟಾಗೆ ಚೀನಾ ಹ್ಯಾಕರ್‌ಗಳ ಕನ್ನ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ವಾಷಿಂಗ್ಟನ್, ಸೆ.17- ಇಂಡೋ-ಚೀನಾ ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಾ ಯುದ್ಧದ ಆತಂಕಕ್ಕೆ ಕಾರಣವಾಗಿರುವ ಚೀನಾ, ಭಾರತದ ಮೇಲೆ ಡಿಜಿಟಲ್ ಆಕ್ರಮಣದ ಕುತಂತ್ರ ಕೃತ್ಯಗಳನ್ನೂ ಮುಂದುವರಿಸಿದೆ.  ಚೀನಾದ ಹ್ಯಾಕರ್‌ಗಳು ಕೇಂದ್ರ ಸರ್ಕಾರದ ಏಳು ನೆಟ್‍ವರ್ಕ್‍ಗಳೂ ಸೇರಿದಂತೆ ವಿಶ್ವದ 100ಕ್ಕೂ ಹೆಚ್ಚು ಕಂಪನಿಗಳ ಡೇಟಾಗಳಿಗೆ ಕನ್ನ ಹಾಕಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಭಾರತದ 1,350ಕ್ಕೂ ಹೆಚ್ಚು ಗಣ್ಯರ ಮಾಹಿತಿಗಳನ್ನು ಚೀನಾ ಸಂಗ್ರಹಿ ಬೇಹುಗಾರಿಕೆ ಮಾಡುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಕಮ್ಯೂನಿಸ್ಟ್ ರಾಷ್ಟ್ರದ ಹ್ಯಾಕಿಂಕ್ ಕೃತ್ಯಗಳು ಆಘಾತಕಾರಿಯಾಗಿದೆ.

ಚೀನಾದ ಐವರು ಹ್ಯಾಕರ್‌ಗಳು ಕೇಂದ್ರ ಸರ್ಕಾರದ ಏಳು ನೆಟ್‍ವರ್ಕ್‍ಗಳು ಮತ್ತು ವಿಶ್ವದ 100ಕ್ಕೂ ಹೆಚ್ಚು ದೊಡ್ಡ ಸಂಸ್ಥೆಗಳ ದತ್ತಾಂಶ ಮಾಹಿತಿಗೆ ಕನ್ನ ಹಾಕಿದ್ದಾರೆ.  ಮೌಲ್ಯಯುತ ಸಾಫ್ಟ್‍ವೇರ್ ಮಾಹಿತಿ ಮತ್ತು ವ್ಯವಹಾರ ಬುದ್ದಿಮತ್ತೆಯನ್ನು ಹ್ಯಾಕರ್‌ಗಳು ಕದ್ದಿದ್ಧಾರೆ ಎಂದು ಅಮೆರಿಕ ನ್ಯಾಯಾಂಗ ಇಲಾಖೆ ಆರೋಪಿಸಿದ್ದು, ಕಂಪ್ಯೂಟರ್ ಕನ್ನಗಳ್ಳರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಕಂಪ್ಯೂಟರ್ ಹ್ಯಾಕಿಂಗ್‍ಗೆ ಸಂಬಂಧಿಸಿದಂತೆ ಚೀನಾದ ಐವರು ಹ್ಯಾಕರ್‌ಗಳು ಮತ್ತು ಇವರಿಗೆ ನೆರವು ನೀಡುತ್ತಿದ್ದ ಮಲೇಷ್ಯಾದ ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಾಂಗ ಇಲಾಕೆಯ ಉಪ ಅಟಾರ್ನಿ ಜನರಲ್ ಜೆಫ್ರಿ ರೋಸನ್ ತಿಳಿಸಿದ್ದಾರೆ.

ಈ ಸಂಬಂಧ ಚೀನಾದ ಐವರು ಪ್ರಜೆಗಳನ್ನು ಬಂಧಿಸಲಾಗಿದೆ. ಮಲೇಷ್ಯಾದ ಇಬ್ಬರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ. ಈ ಹ್ಯಾಕರ್‌ಗಳು ಸರ್ಕಾರ ಮತ್ತು ಪ್ರತಿಷ್ಠಿತ ಸಂಸ್ಥೆಗಳಿಗೆ ಸಂಬಂಧ ಪಟ್ಟ ಮಾಹಿತಿಗಳಿಗೆ ಕನ್ನ ಹಾಕಿ ತಮ್ಮ ಅಕ್ರಮ ವೆಬ್‍ಸೈಟ್ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಿ ಸಾಕಷ್ಟು ಹಣ ಗಳಿಸಿದ್ಧಾರೆ ಎಂದು ಅವರು ಆರೋಪಿಸಿದ್ದಾರೆ.

ಚೀನಾ ಮತ್ತು ಭಾರತ ನಡುವಣ ಗಡಿ ಸಂಘರ್ಷ ನಂತರ ಕಮ್ಯೂನಿಸ್ಟ್ ದೇಶದಿಂದ ನವದೆಹಲಿ ಮೇಲೆ ಡಿಜಿಟಲ್ ಆಕ್ರಮಣ ಹೆಚ್ಚಾಗುತ್ತಿರುವುದು ಅತಂಕದ ಸಂಗತಿಯಾಗಿದೆ.

Facebook Comments