ಈ ವಾರ ‘ಹಫ್ತಾ’ ಚಿತ್ರ ರಿಲೀಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ಈ ವಾರ ಹಫ್ತಾ ನೀಡಲು  ಯುವಪಡೆಗಳು ಬರ್ತಿದ್ದಾರೆ. ಈಗಾಗಲೇ ಗಾಂಧಿನಗರದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಫಿಲಂ ಇಂಡಸ್ಟ್ರಿಯಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಸ್ಟಾರ್ ಚಿತ್ರಗಳ ಸಾಲಿನಲ್ಲಿ ಹಫ್ತಾ ಕೂಡ ಇದೆ ಎನ್ನಲಾಗಿದೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಚಿತ್ರರಂಗದವರೂ ಕೂಡ ನಮ್ಮ ಚಿತ್ರದ ಬಗ್ಗೆ ಕುತೂಹಲದಿಂದ ವಿಚಾರಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರವಾಗಿದೆ ಎಂದು ನಿರ್ದೇಶಕ ಪ್ರಕಾಶ್ ಹೆಬ್ಬಾಳ ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಇನ್ನು ಈ ಚಿತ್ರ ಮೂವರು ಆತ್ಮೀಯ ಸ್ನೇಹಿತರ ಪರಿಶ್ರಮದ ಫಲ ಎನ್ನಬಹುದು. ಈ ಚಿತ್ರದ ನಿರ್ಮಾಪಕರಾದ ಬಾಲರಾಜ್ ಟಿ.ಸಿ. ಪಾಳ್ಯ ಮತ್ತು ಮೈತ್ರಿ ಮಂಜುನಾಥ್ ಹಾಗೂ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಈ ಮೂವರೂ ಸಹ ಕುಚಿಕು ಗೆಳೆಯರು.  ಈ ಚಿತ್ರದಲ್ಲಿ ಭೂಗತ ಜಗತ್ತಿನ ಕರಾಳ ಮುಖಗಳನ್ನು ಅನಾವರಣ ಮಾಡಲು ಮುಂದಾಗಿದೆ ಚಿತ್ರತಂಡ. ಈ ಹಿಂದೆಯೂ ಕೂಡ ಬಹಳಷ್ಟು ಚಿತ್ರಗಳು ಭೂಗತ ಜಗತ್ತಿನ ಕರಾಳ ಸತ್ಯಗಳನ್ನು ತೆರೆದಿಟ್ಟಿವೆ.

ಆದರೆ, ಈ ಹಫ್ತಾ ಚಿತ್ರ ಈ ಹಿಂದೆ ನೋಡಿರದಂತಹ ಒಂದಷ್ಟು ಸೂಕ್ಷ್ಮ ವಿಚಾರಗಳನ್ನು ಪ್ರೇಕ್ಷಕರ ಮುಂದೆ ತರಲು ಸನ್ನದ್ಧರಾಗಿದ್ದಾರೆ. ಈ ಚಿತ್ರವನ್ನು ಕರಾವಳಿ ಭಾಗದಲ್ಲಿ ಹೆಚ್ಚು ಚಿತ್ರೀಕರಣ ಮಾಡಿದ್ದು, ಗೋಕರ್ಣ ಕ್ಷೇತ್ರದ ಮುರುಡೇಶ್ವರವನ್ನು ಬಹಳ ಸೊಗಸಾಗಿ ತೋರಿಸಿದ್ದಾರಂತೆ.  ಅದೇ ರೀತಿ ಆ್ಯಕ್ಷನ್ ದೃಶ್ಯಗಳು ಹಾಗೂ ಸಮುದ್ರದ ಮಧ್ಯೆ ಬೋಟ್‍ನಲ್ಲಿ ನಡೆಯುವ ಸಾಹಸಮಯ ದೃಶ್ಯಗಳು ತುಂಬಾ ರೋಮಾಂಚನಕಾರಿಯಾಗಿ ಮೂಡಿಬಂದಿವೆಯಂತೆ.

ಈ ಚಿತ್ರದಲ್ಲಿ ನಾಯಕ ವರ್ಧನ್ ಅವರ ಪಾತ್ರಕ್ಕೆ ಎರಡು ಶೇಡ್ ಇದ್ದು, ಒಂದರಲ್ಲಿ ರೌಡಿ ಶೀಟರ್ ಆಗಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದಾರೆ. ಅದು ಹೇಗೆ ಎನ್ನುವುದನ್ನು ಚಿತ್ರದಲ್ಲಿ ನೋಡಿಯೇ ತಿಳಿದುಕೊಳ್ಳಬೇಕು. ಮಂಗಳಮುಖಿಯರ ಬಗ್ಗೆಯೂ ಚಿತ್ರದಲ್ಲಿ ಸಾಕಷ್ಟು ವಿಚಾರಗಳನ್ನು ಹೇಳಲಾಗಿದೆ. ವಿಶೇಷವಾಗಿ ಚಿತ್ರದಲ್ಲಿ ನಮ್ಮ ಸಮಾಜಕ್ಕೆ ಒಂದು ಉತ್ತಮ ಸಂದೇಶವಿದೆ ಎನ್ನುತ್ತಿದೆ ಚಿತ್ರತಂಡ.

ಹಫ್ತಾ ಕಮರ್ಷಿಯಲ್ ಮಾಸ್ ಎಂಟರ್‍ಟೈನರ್ ಚಿತ್ರವಾಗಿದೆ. ಈ ಚಿತ್ರವನ್ನು ಎಕ್ಸ್‍ಪೆರಿಮೆಂಟಲ್ ಸಿನಿಮಾ ಅಂತಲೂ ಕರೆಯಬಹುದು. ಏಕೆಂದರೆ ಚಿತ್ರದ ನಿರೂಪಣಾ ಶೈಲಿ, ಸ್ಕ್ರೀನ್ ಪ್ಲೇ, ಕ್ಯಾರೆಕ್ಟರೈಸೇಷನ್ ಎಲ್ಲಾ ವಿಭಿನ್ನವಾಗಿದೆ. ಚಿತ್ರದಲ್ಲಿ ಅಂಡರ್ ವಲ್ರ್ಡ್ ಕಥೆಯ ಜೊತೆಗೆ ಪ್ರೇಕ್ಷಕರು ನಿರೀಕ್ಷಿಸಿರದಂಥ ಒಂದು ಅದ್ಭುತವಾದ ಅಂಶವಿದೆಯಂತೆ.

ಪ್ರಕಾಶ್ ಹೆಬ್ಬಾಳ ಅವರು ಹಿಂದೆ ನಿರ್ದೇಶಕ ದಯಾಳ್ ಪದ್ಮನಾಭನ್, ರಮೇಶ್ ಅರವಿಂದ್‍ರಂಥ ನಿರ್ದೇಶಕರ ಜೊತೆ ಕೆಲಸ ಮಾಡಿ ಪಳಗಿದವರು. ಮೊದಲಿಂದಲೂ ಚಿತ್ರರಂಗದ ಏರಿಳಿತಗಳನ್ನು ಚೆನ್ನಾಗಿ ಅರಿತಿರುವ ಪ್ರಕಾಶ್ ಹೆಬ್ಬಾಳ ಅವರು ಹಫ್ತಾ ಚಿತ್ರಕ್ಕಾಗಿ ಸಾಕಷ್ಟು ಎಫರ್ಟ್ ಹಾಕಿದ್ದಾರೆ.
ಇನ್ನು ಹಫ್ತಾ ಚಿತ್ರದಲ್ಲಿ ಖಳನಟ ವರ್ಧನ್ ತೀರ್ಥಹಳ್ಳಿ ಇದೇ ಮೊದಲ ಬಾರಿಗೆ ನಾಯಕನ ಪಾತ್ರ ನಿರ್ವಹಿಸಿದ್ದಾರೆ.

ಮತ್ತೊಬ್ಬ ನಟ ರಾಘವ ನಾಗ್ ಕೂಡ ಪ್ರಮುಖ ಪಾತ್ರ ಮಾಡಿದ್ದು, ಚಿತ್ರದಲ್ಲಿ ಇಬ್ಬರು ನಾಯಕಿಯರಾಗಿ ಬಿಂಬಶ್ರೀ ನಿನಾಸಂ ಹಾಗೂ ಕೊಡಗು ಮೂಲದ ಮಾಡೆಲ್ ಸೌಮ್ಯ ತಿತೀರಾ ನಟಿಸಿದ್ದು, ಖಳನಾಯಕನಾಗಿ ಬಲರಾಜ್ ವಾಡಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಜಯ್ ಯಾಡ್ರ್ಲಿನಾ ಸಂಗೀತ ಸಂಯೋಜನೆ ಮಾಡಿದ್ದಾರೆ.

ಹಿನ್ನಲೆ ಸಂಗೀತವನ್ನು ಗೌತಂ ಶ್ರೀವತ್ಸ ಒದಗಿಸಿದ್ದಾರೆ. ಸೂರಿ ಸಿನಿಟೆಕ್ ಈ ಚಿತ್ರಕ್ಕೆ ಕ್ಯಾಮೆರಾವರ್ಕ್ ಮಾಡಿದ್ದಾರೆ.  ಯುವಪಡೆಗಳು ಸೇರಿಕೊಂಡು ನಿರ್ಮಿಸಿರುವಂತಹ ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ