ಎಚ್‍ಎಎಲ್ ನೌಕರರ ಮುಷ್ಕರದ ಹಿಂದಿದೆ ವ್ಯವಸ್ಥಿತ ಪಿತೂರಿ..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.15- ದೇಶದಲ್ಲಿ ಯುದ್ಧ ಸನ್ನಿವೇಶದ ಪರಿಸ್ಥಿತಿ ಇರುವ ಸಂದರ್ಭದಲ್ಲೇ ಯುದ್ಧ ವಿಮಾನಗಳು, ಹೆಲಿಕಾಪ್ಟರ್‍ಗಳು ಮತ್ತು ರಕ್ಷಣಾ ಇಲಾಖೆಗೆ ಅಗತ್ಯ ಉತ್ಪನ್ನಗಳನ್ನು ಸರಬರಾಜು ಮಾಡುವ ಎಚ್‍ಎಎಲ್ ಕಾರ್ಯ ಸ್ಥಗಿತದ ಹಿಂದೆ ಮುಷ್ಕರದ ವ್ಯವಸ್ಥಿತ ಪಿತೂರಿ ಇರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಸಹಿಸದೆ ಕೆಲವು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಕಾರ್ಮಿಕ ಸಂಘಟನೆಗಳ ಮೇಲೆ ಅನುಚಿತ ಪ್ರಭಾವ ಬೀರಿ ಮುಷ್ಕರಕ್ಕೆ ಪ್ರಚೋದನೆ ನೀಡಿ ಪರಿಸ್ಥಿತಿಯನ್ನು ಕದಡಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಭಾರತದ ಬಹುತೇಕ ಸಾರ್ವಜನಿಕ ವಲಯ ಸಂಸ್ಥೆ (ಪಿಎಸ್‍ಯು) ಗಳಂತೆ ಬಿಳಿಯಾನೆ ಎಂಬ ಹಾಸ್ಯಕ್ಕೆ ಗುರಿಯಾಗಿ ಅಸಮರ್ಪಕ ಕಾರ್ಯ ಸಂಸ್ಕøತಿಯ ಕಳಂಕಕ್ಕೆ ಒಳಗಾಗಿರುವ ಭಾರತದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ನೌಕರರ ಅನಿರ್ದಿಷ್ಟ ಅವಧಿ ಮುಷ್ಕರದ ಬಿಸಿ ಭಾರತದ ಹೆಮ್ಮೆಯ ಸಂಸ್ಥೆಗೆ ತಟ್ಟಿದೆ. ಭಾರತೀಯ ರಕ್ಷಣಾ ವ್ಯವಸ್ಥೆ ಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿರುವ ಎಚ್‍ಎಎಲ್‍ನ ಕಾರ್ಮಿಕರು ಪ್ರಸ್ತುತ ಭಾರತ -ಪಾಕಿಸ್ತಾನ ನಡುವೆ ಗಡಿ ಭಾಗದಲ್ಲಿ ಉದ್ಭವಿಸಿರುವ ಪ್ರಕ್ಷುಬ್ಧ ಪರಿಸ್ಥಿತಿ ಸಂದರ್ಭದಲ್ಲೇ ಮುಷ್ಕರದ ಹಾದಿ ಹಿಡಿದಿರುವುದು ದೇಶದ ಭದ್ರತಾ ದೃಷ್ಟಿಯಿಂದ ಅತ್ಯಂತ ಆಘಾತಕಾರಿ ಸಂಗತಿಯಾಗಿದೆ.

ಅನ್ಯ ದೇಶಗಳ ರಕ್ಷಣಾ ಇಲಾಖೆಗಳಲ್ಲಿ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಗಳನ್ನು ನಡೆಸುತ್ತಾರಾದರೂ ಅಗತ್ಯ ಮತ್ತು ಅನಿವಾರ್ಯ ಘಟಕಗಳನ್ನು ಸ್ಥಗಿತಗೊಳಿಸಿ ಮುಷ್ಕರದ ಹಾದಿ ಹಿಡಿದಿರುವ ನಿದರ್ಶನಗಳಿಲ್ಲ. ಆದರೆ ಪ್ರಸ್ತುತ ಗಂಡಾಂತರಕಾರಿ ಸನ್ನಿವೇಶದಲ್ಲೇ ಎಚ್‍ಎಎಲ್ ನೌಕರರ ಮುಷ್ಕರದ ಹಿಂದೆ ದೊಡ್ಡ ಪಿತೂರಿ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವೇತನ ಪರಿಷ್ಕರಣೆ ಒಳಗೊಂಡಂತೆ ತಮ್ಮ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರು ಸೇರಿದಂತೆ ಭಾರತದ 9 ಘಟಕಗಳ ಸುಮಾರು 20,000 ಎಚ್‍ಎಎಲ್ ಕಾರ್ಮಿಕರು ನಿನ್ನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಬೆಂಗಳೂರಿನ ಎಚ್‍ಎಎಲ್ ಕಾರ್ಖಾನೆಯಲ್ಲಿ ಮುಷ್ಕರದ ದುಷ್ಪರಿಣಾಮದ ಬಿಸಿ ಈಗಾಗಲೇ ತಟ್ಟಿದೆ.

ಅತ್ಯಂತ ಹಗುರ ಯುದ್ಧ ವಿಮಾನ ಎಲ್‍ಸಿಎ ತೇಜಸ್ ಮತ್ತು ಎಸ್‍ಯು-30, ಎಂಕೆಐ ಜೆಟ್ ನಿರ್ಮಾಣ ಅತ್ಯಂತ ನಿರ್ಣಾಯಕ ಘಟ್ಟ ತಲುಪಿರು ವಾಗಲೇ ನೌಕರರು ಮುಷ್ಕರ ಹಿಡಿದಿರುವುದರಿಂದ ಕೆಲಸ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದೆ. ಭಾರತೀಯ ವಾಯುಪಡೆಗೆ ಯುದ್ಧ ವಿಮಾನಗಳನ್ನು ಸಕಾಲದಲ್ಲಿ ಪೂರೈಸದೆ ಗಡುವನ್ನು ವಿಸ್ತರಿಸುತ್ತಾ ಮತ್ತು ಅಸಮರ್ಪಕ ಕಾರ್ಯದಿಂದ ಈಗಾಗಲೇ ವ್ಯಾಪಕ ಟೀಕೆಗೆ ಗುರಿಯಾಗಿರುವ ಎಚ್‍ಎಎಲ್‍ಗೆ ನೌಕರರ ಮುಷ್ಕರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುಷ್ಕರ ನಿರತ ಕಾರ್ಮಿಕರು ತಮ್ಮ ಹರತಾಳವನ್ನು ಸಮರ್ಥಿಸಿ ಕೊಂಡಿದ್ದಾರೆ. ಇದು ಕಾನೂನು ಬಾಹಿರ ಎಂದು ಆಡಳಿತ ಮಂಡಳಿ ಆರೋಪಿಸಿದ್ದು , ಪರಸ್ಪರ ಆರೋಪ-ಪ್ರತ್ಯಾರೋಪಗಳು ಮುಂದುವರೆದಿವೆ. ನಮ್ಮ ನ್ಯಾಯಯುತ ಬೇಡಿಕೆ ಗಳನ್ನು ಈಡೇರಿಸಲು ಆಡಳಿತ ಮಂಡಳಿಗೆ ನಾವು ಸಾಕಷ್ಟು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋ ಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ 9 ಘಟಕಗಳ ಕಾರ್ಮಿಕರು ಮುಷ್ಕರ ನಡೆಸುವುದು ಅನಿವಾರ್ಯ ವಾಗಿದೆ ಎಂದು ಅಖಿಲ ಭಾರತ ಎಚ್‍ಎಎಲ್ ಕಾರ್ಮಿಕ ಒಕ್ಕೂಟಗಳ ಸಮನ್ವಯ ಸಮಿತಿ (ಎಐಎಚ್‍ಎಎಲ್‍ಟಿಯುಸಿಸಿ) ಮುಖ್ಯ ಸಂಚಾಲಕ ಸೂರ್ಯ ದೇವರ ಚಂದ್ರಶೇಖರ್ ಸಮರ್ಥಿಸಿ ಕೊಂಡು ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದಿದ್ದಾರೆ.

ನೌಕರರ ಮುಷ್ಕರವನ್ನು ಅಕ್ರಮ ಮತ್ತು ಕಾನೂನು ಬಾಹಿರ ಎಂದು ಆಡಳಿತ ಮಂಡಳಿಯ ಮುಖ್ಯಸ್ಥರು ಆರೋಪಿಸಿದ್ದಾರೆ. ನೌಕರರ ಬೇಡಿಕೆಗಳನ್ನು ಈಡೇರಿಸಲು ನಾವು ಸ್ವಲ್ಪ ಕಾಲಾ ವಕಾಶ ಕೇಳಿ ಸೌಹಾರ್ದಯುತ ಇತ್ಯರ್ಥಕ್ಕೆ ಮುಕ್ತ ಮನಸ್ಸು ಹೊಂದಿದ್ದರೂ ನಮ್ಮ ಮನವಿಯನ್ನು ಧಿಕ್ಕರಿಸಿ ಕಾರ್ಮಿಕ ಸಂಘಟನೆ ಅನಿರ್ದಿಷ್ಟ ಅವಧಿ ಮುಷ್ಕರದ ಹಾದಿ ಹಿಡಿದಿದೆ. ಇದು ಅಕ್ರಮ ಮತ್ತು ಕಾನೂನು ಬಾಹಿರ ಎಂದು ಆರೋಪಿಸಿದ್ದಾರೆ.

ಎಚ್‍ಎಎಲ್‍ಗೆ ಕಳಂಕ: ಎಚ್‍ಎಎಲ್ ಭಾರತೀಯ ರಕ್ಷಣಾ ವ್ಯವಸ್ಥೆಗೆ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಪೂರೈಸುವಲ್ಲಿ ವಿಶ್ವದಲ್ಲೇ ಗುರುತಿಸಿಕೊಂಡಿದ್ದರೂ ಇತ್ತೀಚಿನ ದಿನಗಳಲ್ಲಿ ಇದರ ಕಾರ್ಯ ನಿರ್ವಹಣೆ ಪ್ರಶ್ನಿಸುವಂತಾಗಿದೆ.ಐಐಎಫ್‍ಕೆ ಸಕಾಲದಲ್ಲಿ ಯುದ್ಧ ವಿಮಾನ ಗಳನ್ನು ಪೂರೈಸದೆ ವಿಳಂಬ ಮಾಡುತ್ತಿರುವುದು ಮತ್ತು ಒಂದು ಯೋಜನೆ ಪೂರ್ಣಗೊಳಿಸಲು ಗಡುವನ್ನು ಪದೇ ಪದೇ ಮುಂದೂಡುತ್ತಿರುವುದರಿಂದ ಈ ಸಂಸ್ಥೆಗೆ ಅಸಮರ್ಥ ಎಂಬ ಕಳಂಕ ಹೊತ್ತಿದೆ.

ಅಲ್ಲದೆ ಇತರ ದೇಶಗಳಲ್ಲಿ ನಿರ್ಮಾಣವಾಗುವ ಯುದ್ಧ ವಿಮಾನಗಳು ಮತ್ತು ಸಮರ ಹೆಲಿಕಾಪ್ಟರ್‍ಗಳಿಗಿಂತಲೂ ಇಲ್ಲಿ ತಯಾರಾಗುವ ಫೈಟರ್ ಜೆಟ್‍ಗಳು ದುಬಾರಿ ಎಂಬುದು ಸಾಬೀತಾಗಿದೆ.
ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ ಲೆಕ್ಕ ಪರಿಶೋಧನಾ ವರದಿಯಲ್ಲಿ ಎಚ್‍ಎಎಲ್‍ನಲ್ಲಿ ತಯಾರಾದ ಎಸ್‍ಯು-30ಎಂಕೆಐ ಯುದ್ಧ ವಿಮಾನ ಅದರ ಮಾತೃ ಸಂಸ್ಥೆಯಲ್ಲಿ ತಯಾರಾದ ಮೌಲ್ಯ ಕ್ಕಿಂತಲೂ 150 ಕೋಟಿ ರೂ. ಹೆಚ್ಚು ಎಂಬುದನ್ನು ತಿಳಿಸಿತ್ತು.

ರಷ್ಯಾ ನಿರ್ಮಿತ ಈ ವಿಮಾನ ಮಾಸ್ಕೋದಲ್ಲಿ 270 ಕೋಟಿ ರೂ.ಗಳಿಗೆ ನಿರ್ಮಾಣವಾದರೆ ಅದೇ ವಿಮಾನ ಎಚ್‍ಎಎಲ್‍ನಲ್ಲಿ ನಿರ್ಮಿಸಲು ತಗುಲಿದ ವೆಚ್ಚ 418 ಕೋಟಿ . ಹೀಗಾಗಿ 150 ಕೋಟಿಗಳಷ್ಟು ಹೆಚ್ಚಿನ ಹೊರೆ ಸರ್ಕಾರಕ್ಕೆ ಬೀಳುವಂತಾಗಿದೆ. ಇತರ ಯುದ್ಧ ವಿಮಾನಗಳ ತಯಾರಿಕೆಯಲ್ಲೂ ಇದೇ ಪರಿಸ್ಥಿತಿ ಇದೆ. ಈ ಎಲ್ಲಾ ಕಾರಣಗಳಿಂದ ಎಚ್‍ಎಎಲ್ ಆರ್ಥಿಕ ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದೆ.  ಎಚ್‍ಎಎಲ್ ಅನ್ನು ನಿರ್ವಹಣೆ ಮಾಡುವುದು ಐರಾವತವನ್ನು ಸಾಕಿದಂತೆ ಎಂಬ ಟೀಕೆಗಳು ಈಗಾಗಲೇ ಕೇಂದ್ರ ಸರ್ಕಾರದ ವಲಯದಲ್ಲೇ ಕೇಳಿ ಬಂದಿವೆ.

Facebook Comments