ತುಮಕೂರಿನಲ್ಲಿ ಹಾಫ್ ಹೆಲ್ಮೆಟ್ ಆಪರೇಷನ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.1- ಹೆಲ್ಮೆಟ್ ಧರಿಸಿ ಅಮೂಲ್ಯ ಪ್ರಾಣ ರಕ್ಷಿಸಿಕೊಳ್ಳಿ ಹಾಗೂ ಸಂಚಾರಿ ನಿಯಮ ಪಾಲಿಸಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದರೂ ಸಹ ನಮ್ಮ ಜನ ಕೇವಲ ದಂಡ ತಪ್ಪಿಸಿಕೊಳ್ಳಲು ಹಾಫ್ ಹೆಲ್ಮೆಟ್ ಹಾಕಿಕೊಂಡು ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದು , ಇದರ ವಿರುದ್ಧ ಆಪರೇಷನ್ ಪ್ರಾರಂಭಿಸಿರುವ ಸಂಚಾರಿ ಪೊಲೀಸರು ಸಾವಿರಾರು ಹಾಫ್ ಹೆಲ್ಮೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿ ಯುವಕನೊಬ್ಬ ಮಾಡಿದ ಹೆಲ್ಮೆಟ್ ಕುರಿತ ಟಿಕ್‍ಟಾಕ್‍ನಿಂದ ಪೊಲೀಸರು ಅರ್ಧ ಹಾಫ್ ಹೆಲ್ಮೆಟ್ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಪೊಲೀಸರು ಹಾಫ್ ಹೆಲ್ಮೆಟ್ ಕಾರ್ಯಾಚರಣೆ ಆರಂಭಿಸಿದ್ದು , ಅರ್ಧ ಹೆಲ್ಮೆಟ್ ಹಾಕಿಕೊಂಡು ದ್ವಿಚಕ್ರ ಚಾಲನೆ ಮಾಡುತ್ತಿರುವವರನ್ನು ತಡೆದು ಹೆಲ್ಮೆಟ್‍ಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ.

ಅರ್ಧ ಹೆಲ್ಮೆಟ್‍ಗಳನ್ನು ವಶಪಡಿಸಿಕೊಂಡು ಸಂಚಾರಿ ನಿಯಮ ಪಾಲಿಸಿ ಅಮೂಲ್ಯವಾದ ಜೀವಗಳನ್ನು ರಕ್ಷಿಸಿ ಎಂದು ಪೊಲೀಸರು ದ್ವಿಚಕ್ರ ವಾಹನ ಸವಾರರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಮತ್ತೆ ಇದೇ ಪುನರಾವರ್ತಿತವಾದರೆ ದಂಡ ಬೀಳೋದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದ್ದಾರೆ. ಕಳೆದ 10 ದಿನಗಳ ಹಿಂದೆ ಅರ್ಧ ಹೆಲ್ಮೆಟ್ ಧರಿಸದಂತೆ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿತ್ತು. ವಿನಾಯತಿ ಸಮಯವನ್ನೂ ನೀಡಿತ್ತು. ಆದರೂ ಸಹ ಸವಾರರು ಹಾಫ್ ಹೆಲ್ಮೆಟ್ ಧರಿಸಿ ರೋಡಿಗಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಳೆದ ಮೂರ್ನಾಲ್ಕು ದಿನಗಳಿಂದ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಪತ್ರಿಕೆಯೊಂದಿಗೆ ಮಾತನಾಡಿ, ಪೊಲೀಸರ ಹಾಫ್ ಹೆಲ್ಮೆಟ್ ಕಾರ್ಯಾಚರಣೆಗೆ ಕೆಲ ಬೈಕ್ ಸವಾರರು ಬೇಸರ ವ್ಯಕ್ತಪಡಿಸಿದ್ದೂ ಇದೆ. ರಸ್ತೆ ಬದಿಗಳಲ್ಲಿ, ಸ್ಟೋರ್‍ಗಳಲ್ಲಿ ಹಾಫ್ ಹೆಲ್ಮೆಟ್ ಮಾರುತ್ತಾರೆ. ಬಡವರು ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಖರಿದಿಸುತ್ತಾರೆ. ಮೊದಲು ಅರ್ಧ ಹೆಲ್ಮೆಟ್ ಮಾರಾಟ ಮಾಡೋದನ್ನು ನಿಲ್ಲಿಸಿ ಬಳಿಕ ಕಾರ್ಯಚರಣೆ ಮಾಡಲಿ ಎಂದು ಬೈಕ್ ಸವಾರರ ವಾದವಾಗಿದೆ.

ಇದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಕೆಲವು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಹೆಲ್ಮೆಟ್‍ಗಳನ್ನು ವಶಪಡಿಸಿಕೊಳ್ಳಿ. ಆದರೆ ಅವರ ಸಮ್ಮುಖದಲ್ಲಿ ಹಾಕುವುದಾಗಲಿ ಅನುಚಿತವಾಗಿ ವರ್ತಿಸುವ ಮಾಡಬೇಡಿ ಎಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅನುಚಿತವಾಗಿ ವರ್ತಿಸಿದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಸೂಚಿಸಿದ್ದಾರೆ.

ಹೆಲ್ಮೆಟ್ ಗಳನ್ನು ಮಾರಾಟ ಮಾಡುವವರು ಹೆಲ್ಮೆಟ್‍ಗಳನ್ನು ಮಾರಾಟ ಮಾಡಬಾರದು ಒಂದು ವೇಳೆ ಮಾರಾಟ ಮಾಡಿದರೆ ಅವರ ಮೇಲೆಯೂ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಸವಾರರ ಹಿತರಕ್ಷಣೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ನಮ್ಮ ಇಲಾಖೆಯ ಅಧಿಕಾರಿಗಳು ಪಾಲಿಸುತ್ತಿದ್ದಾರೆ. ಹೆಲ್ಮೆಟ್‍ಗಳು ಧರಿಸದೆ ಇರುವ ಪರಿಣಾಮ ಅಪಘಾತಗಳು ಸಂಭವಿಸಿದಾಗ ಮೊದಲು ತಲೆಗೆ ಏಟು ಬಿದ್ದು ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ.

ಅದರ ಹಿನ್ನೆಲೆಯಲ್ಲಿ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಸಾರ್ವಜನಿಕರು ಸಹಕರಿಸಿ ಮೂಲ್ಯವಾದಿ ಜೀವವನ್ನು ಉಳಿಸಿಕೊಳ್ಳಲು ವಾಹನಗಳಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದು ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

Facebook Comments