ಹಂಸಲೇಖ ಪರ-ವಿರೋಧ ಪ್ರತಿಭಟನೆ, ಪೊಲೀಸ್ ಠಾಣೆ ಬಳಿ ಹೈಡ್ರಾಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.25- ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರು ಇಂದು ಬಸವನಗುಡಿ ಠಾಣೆಗೆ ವಿಚಾರಣೆಗೆ ಹಾಜರಾದರು. ಹಂಸಲೇಖ ಅವರು ಠಾಣೆಗೆ ಆಗಮಿಸಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆ ಗಳು, ಕನ್ನಡ ಪರ ಸಂಘಟನೆಗಳಿಂದ ಠಾಣೆ ಮುಂಭಾಗ ಪರ-ವಿರೋಧದ ಪ್ರತಿಭಟನೆಗಳು ನಡೆದವು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬ್ಯಾರಿಕೇಡ್‍ಗಳನ್ನು ಹಾಕಿ ಬಿಗಿ ಭದ್ರತೆ ಕೈಗೊಂಡಿದ್ದರು. ಹಂಸಲೇಖ ಅವರು ಕ್ಷಮೆ ಕೇಳಿದರೆ ಸಾಲದು, ವಿದ್ಯಾಪೀಠ ವೃತ್ತದಲ್ಲಿರುವ ಶ್ರೀಗಳ ಸನ್ನಿಧಾನಕ್ಕೆ ಬಂದು ಕ್ಷಮೆಯಾಚಿಸಬೇಕು. ಅವರು ಬಹಿರಂಗ ಸಭೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಹಾಗಾಗಿ ಶ್ರೀಗಳ ಸನ್ನಿಧಾನದಲ್ಲಿ ಬಂದು ಕ್ಷಮೆಯಾಚಿಸಬೇಕೆಂದು ಹಲವು ಹಿಂದೂಪರ ಸಂಘಟನೆಗಳು ಒತ್ತಾಯಿಸಿದವು. ಅಲ್ಲದೆ ಚೇತನ್ ಅವರು ಹಂಸಲೇಖ ಅವರೊಂದಿಗೆ ಆಗಮಿಸುತ್ತಿದ್ದಾರೆ ಎಂಬ ವಿಷಯಕ್ಕೂ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಅವರು ಮಾಡಿದ ಟ್ವಿಟ್‍ಗೂ ಕೂಡ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಚೇತನ್ ಇಲ್ಲಿಗೆ ಬರುವುದು ಬೇಡ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿರೋಧವಾಗಿ ವಿವಿಧ ಸಂಘಟನೆಗಳ ಮುಖಂಡರು ಈಗಾಗಲೇ ಹಂಸಲೇಖ ಅವರು ಕ್ಷಮೆಯಾಚಿಸಿದ್ದಾರೆ. ಅನಗತ್ಯವಾಗಿ ಈ ವಿಷಯವನ್ನು ಪ್ರಸ್ತಾಪಿಸುವುದು ಬೇಡ ಎಂದು ಹೇಳಿದರು. ಈ ಸಂದರ್ಭದಲ್ಲಿ ನಟ ಚೇತನ್ ಆಗಮಿಸಿದಾಗ ಠಾಣೆ ಮುಂಭಾಗ ಸಂಘಟನೆಗಳ ಮುಖಂಡರ ನಡುವೆ ಮಾತಿನ ವಾಗ್ವಾದ ನಡೆಯಿತು.

ಹಂಸಲೇಖ ಅವರು ಕ್ಷಮೆ ಕೇಳಿದ್ದರೂ ಸಹ ವಿನಾಃಕಾರಣ ಅವರಿಗೆ ಕಿರುಕುಳ ನೀಡಿ ಅವರನ್ನು ತೇಜೋವಧೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಚೇತನ್ ಈ ಸಂದರ್ಭದಲ್ಲಿ ಹೇಳಿದರು.  ಹಂಸಲೇಖ ಅವರ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬ್ರಾಹ್ಮಣ ಮಹಾಸಭಾದವರು ಬಸವನಗುಡಿ ಠಾಣೆಗೆ ದೂರು ನೀಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಹಂಸಲೇಖ ಅವರಿಗೆ ಎರಡನೆ ನೋಟಿಸ್ ನೀಡಲಾಗಿತ್ತು.

Facebook Comments