76ನೇ ವಸಂತಕ್ಕೆ ಕಾಲಿಟ್ಟ ಬಿಗ್-ಬಿ

ಈ ಸುದ್ದಿಯನ್ನು ಶೇರ್ ಮಾಡಿ

Amitab--01

ಮುಂಬೈ/ನವದೆಹಲಿ, ಅ.11- ಬಾಲಿವುಡ್ ಶೆಹನ್‍ಶಾ ಅಮಿತಾಭ್ ಬಚ್ಚನ್ ಇಂದು 76ನೇ ವರ್ಷಕ್ಕೆ ಪಾದರ್ಪಣೆ ಮಾಡಿದ್ದಾರೆ. ಬಿಗ್-ಬಿ ಜನ್ಮ ದಿನದ ಅಂಗವಾಗಿ ಅನೇಕ ಗಣ್ಯಾತಿಗಣ್ಯರು ಮತ್ತು ಹಾಲಿವುಡ್ ಖ್ಯಾತನಾಮರು ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಈ ವಯಸ್ಸಿನಲ್ಲೂ ಅತ್ಯಂತ ಕ್ರಿಯಾಶೀಲರಾಗಿರುವ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಸಿನಿಮಾ, ಜಾಹೀರಾತು, ಟೆಲಿವಿಷನ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ.

ಐದು ದಶಕಗಳ ಸಿನಿಮಾ ವೃತ್ತಿಯಲ್ಲಿ ಏಳು-ಬೀಳುಗಳ ನಡುವೆಯೂ ಬಡೇಮಿಂಯಾ ಬಚ್ಚನ್ ಸಾಧಿಸಿರುವ ಸಾಧನೆ ಅದ್ಭುತ. ಯಶಸ್ಸಿನ ಉತ್ತುಂಗದಿಂದ ವಿಫಲತೆಯ ಪ್ರಪಾತಕ್ಕೆ ಬಿದ್ದಿದ್ದ ಬಿಗ್-ಬಿ ಅಗ್ನಿಹಂಸದಂತೆ ಸುಟ್ಟು ಬೂದಿಯಿಂದ ಮರುಹುಟ್ಟು ಪಡೆದು ಮತ್ತೆ ಸಫಲತೆಯ ಅಲೆಯ ಮೇಲೆ ಸವಾರಿ ಮಾಡುತ್ತಿರುವ ಮಹಾ ಸಾಧಕ ಮತ್ತು ಸಾಹಸಿ. ಒಂದು ಕಾಲದಲ್ಲಿ ನಿರ್ಮಾಪಕ ಡಾರ್ಲಿಂಗ್ ಆಗಿದ್ದ ಎಬಿ ಮನೆ ಬಾಗಿಲಿನ ಮುಂದೆ ಚಿತ್ರ ನಿರ್ಮಾಪಕರು ಅವಕಾಶಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಬಚ್ಚನ್‍ಗೆ ಅವರು ಹುಟ್ಟುಹಾಕಿದ ಎಬಿಸಿ ಕಂಪನಿಯೇ ಮುಳುವಾಯಿತು.

ಕೋಟ್ಯಂತರ ರೂಪಾಯಿಗಳ ಸಾಲವನ್ನು ಮೈಮೇಲೆ ಎಳೆದುಕೊಂಡು ಅಕ್ಷರಶಃ ದಿವಾಳಿಯಾದರು. ನಟಿಸಿದ ಚಿತ್ರಗಳು ಸಾಲು ಸಾಲಾಗಿ ತೋಪಾದವು. ಎಬಿ ಕಾಲ್‍ಶೀಟ್‍ಗಾಗಿ ಹಾತೊರೆಯುತ್ತಿದ್ದ ನಿರ್ಮಾಪಕರು ಅವರತ್ತ ತಿರುಗಿ ನೋಡದಂತಾದರು. ಗ್ರೇಟ್ ಮ್ಯಾನ್ ಬಾಲಿವುಡ್‍ಗೆ ಐರನ್ ಲೆಗ್ ಆದರು. ಇನ್ನೆನ್ನೂ ಬಚ್ಚನ್ ಬೀದಿ ಪಾಲಾಗುತ್ತಾರೆ ಎನ್ನುವಷ್ಟರಲ್ಲೇ ಅವರಿಗೆ ವರದಾನವಾದ್ದುದ್ದು ಕೆಬಿಸಿ(ಕೌನ್ ಬನೇಗಾ ಕರೋಡ್‍ಪತಿ). ಅಲ್ಲಿಂದ ಬಿಗ್-ಬಿ ಮತೆ ಹಿಂದಿರುಗಿ ನೋಡಲೇ ಇಲ್ಲ. ಸಿನಿಮಾದ ಕಥೆಯಂತೆಯೇ ಮತ್ತೆ ಬೇರು ಮಟ್ಟದಿಂದಲೇ ಸದೃಢರಾಗಿ ಬಾಲಿವುಡ್‍ನಲ್ಲಿ ಹೆಮ್ಮರವಾಗಿ ಬೆಳೆದರು.

ಇಂದು ಬಿಗ್-ಬಿ ಜನಪ್ರಿಯತೆ ಎಷ್ಟಿದೆ ಎಂದರೆ ಟೆಲಿವಿಷನ್ ಮುಂದೆ ಕುಳಿತು ಯಾವುದೇ ಚಾಲೆನ್ ನೋಡಿದರೂ ಅಲ್ಲೊಂದು ಬಚ್ಚನ್ ಅಭಿನಯದ ಜಾಹೀರಾತು ಇದ್ದೇ ಇರುತ್ತದೆ. ಇನ್ನು ಸಿನಿಮಾಗಳ ಅವಕಾಶಗಳಂತೂ ಲೆಕ್ಕವೇ ಇಲ್ಲ. ತನ್ನ ಓರಿಗೆಯ ನಟರು ಅಸೂಯೆ ಮತ್ತು ವೃತ್ತಿ ಮಾತ್ಸರ್ಯ ಪಟ್ಟುಕೊಳ್ಳುವಷ್ಟರ ಮಟ್ಟಿಗೆ ಬಚ್ಚನ್ ವಿಜೃಂಭಿಸುತ್ತಿದ್ದಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿರುವ ಬಚ್ಚನ್ ಮೇಣದ ಪ್ರತಿರೂಪ ಟುಸ್ಸಾಡ್ ಮ್ಯೂಸಿಯಂನಲ್ಲಿ ಸೃಷ್ಟಿಯಾಗಿರುವುದು ಈ ಲಂಬೂಜಿಯ ಲೋಕಪ್ರಿಯತೆಗೆ ಸಾಕ್ಷಿ. ಬಚ್ಚನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಮತ್ತು ಬ್ರಹ್ಮಾಸ್ತ್ರ ತೀವ್ರ ಕುತೂಹಲ ಕೆರಳಿಸಿದೆ.

Facebook Comments